ಮೊಹಾಲಿಯಲ್ಲಿ ಯಾರ ಕೊರಳಿಗೆ ಗೆಲುವಿನ ಮಾಲೆ?
ಮೊಹಾಲಿ,ಮಾ.9: ಆತಿಥೇಯ ಭಾರತ ವಿರುದ್ಧ ಮೂರನೇ ಪಂದ್ಯವನ್ನು ಗೆದ್ದುಕೊಂಡು ಸರಣಿಯಲ್ಲಿ ತನ್ನ ಸ್ಪರ್ಧೆಯನ್ನು ಕಾಯ್ದಿರಿಸಿರುವ ಆಸ್ಟ್ರೇಲಿಯ ತಂಡ ರವಿವಾರ ನಾಲ್ಕನೇ ಏಕದಿನ ಪಂದ್ಯವನ್ನಾಡಲು ಸಜ್ಜಾಗಿದೆ.
ಭಾರತ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಿದ್ದು ವಿಶ್ವಕಪ್‌ಗಿಂತ ಮೊದಲು ಯುವ ವಿಕೆಟ್‌ಕೀಪರ್-ದಾಂಡಿಗ ರಿಷಭ್ ಪಂತ್‌ಗೆ ಒಂದಷ್ಟು ಆಡುವ ಅವಕಾಶ ನೀಡಲು ನಾಯಕ ವಿರಾಟ್ ಕೊಹ್ಲಿ ಹಾಗೂ ಟೀಮ್ ಮ್ಯಾನೇಜ್‌ಮೆಂಟ್ ಬಯಸಿದೆ.
ಎಂ.ಎಸ್. ಧೋನಿ ತನ್ನ ತವರು ಮೈದಾನ ರಾಂಚಿಯಲ್ಲಿ ಕೊನೆಯ ಅಂತರ್‌ರಾಷ್ಟ್ರೀಯ ಪಂದ್ಯವನ್ನು ಆಡಿದ್ದು ಅವರಿಗೆ ಸರಣಿಯ ಉಳಿದೆರಡು ಪಂದ್ಯಗಳಿಂದ ವಿಶ್ರಾಂತಿ ನೀಡಲಾಗಿದೆ. ಪಂತ್ ಈ ಹಿಂದೆ ಕೇವಲ ಬ್ಯಾಟ್ಸ್‌ಮನ್ ಆಗಿ ಆಡಿದ್ದರು. ಧೋನಿ ಅನುಪಸ್ಥಿತಿಯಲ್ಲಿ ಪಂತ್ ಸರಣಿಯ ಉಳಿದೆರಡು ಪಂದ್ಯಗಳಲ್ಲಿ ವಿಕೆಟ್‌ಕೀಪಿಂಗ್ ಮಾಡುವ ಅವಕಾಶ ಪಡೆಯಲಿದ್ದಾರೆ. ಭಾರತ ತಂಡ ಅಂತಿಮ-11ರ ಬಳಗದಲ್ಲಿ ಮುಹಮ್ಮದ್ ಶಮಿ ಅಥವಾ ಜಸ್‌ಪ್ರಿತ್ ಬುಮ್ರಾ ಬದಲಿಗೆ ಭುವನೇಶ್ವರ ಕುಮಾರ್‌ರನ್ನು ಕಣಕ್ಕಿಳಿಸಬಹುದು.
‘‘ಮುಂದಿನ ಎರಡು ಪಂದ್ಯಗಳಲ್ಲಿ ನಾವು ಕೆಲವು ಬದಲಾವಣೆ ಮಾಡಲಿದ್ದು, ಪಂದ್ಯ ಗೆಲ್ಲಿಸುವ ಪ್ರದರ್ಶನ ನೀಡುವಂತೆ ಆಟಗಾರರಿಗೆ ಸಲಹೆ ನೀಡಿದ್ದೇವೆ. ಇಂಗ್ಲೆಂಡ್‌ಗೆ ವಿಮಾನ ಏರುವ ಮೊದಲು ಉತ್ತಮ ಪ್ರದರ್ಶನ ನೀಡಲು ಆಟಗಾರರು ಎದುರು ನೋಡುತ್ತಿದ್ದಾರೆ’’ ಎಂದು 3ನೇ ಏಕದಿನ ಕ್ರಿಕೆಟ್ ಪಂದ್ಯದ ಬಳಿಕ ಕೊಹ್ಲಿ ಹೇಳಿದ್ದಾರೆ.
ಭಾರತದ ಅಗ್ರ ಕ್ರಮಾಂಕದಲ್ಲಿ ಕೊಹ್ಲಿ ಹೊರತುಪಡಿಸಿ ಬೇರ್ಯಾರು ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಕೊಹ್ಲಿ 3 ಪಂದ್ಯಗಳಲ್ಲಿ 2 ಶತಕ ಸಹಿತ ಒಟ್ಟು 283 ರನ್ ಗಳಿಸಿದ್ದಾರೆ. ಕೇದಾರ್ ಜಾಧವ್ ಒಟ್ಟು 118 ರನ್ ಗಳಿಸಿ ಎರಡನೇ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ರೋಹಿತ್ ಶರ್ಮಾ ರನ್ ಬರ ಎದುರಿಸುತ್ತಿದ್ದು 3 ಇನಿಂಗ್ಸ್ ಗಳಲ್ಲಿ ಕೇವಲ 51 ರನ್ ಗಳಿಸಿದ್ದಾರೆ. 4ನೇ ಕ್ರಮಾಂಕದಲ್ಲಿ ಆಡಿದ ಅಂಬಟಿ ರಾಯುಡು 3 ಪಂದ್ಯಗಳಲ್ಲಿ 33 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಶಿಖರ್ ಧವನ್ ಕೂಡ ರನ್‌ಗಾಗಿ ಪರದಾಟ ನಡೆಸುತ್ತಿದ್ದು 3 ಪಂದ್ಯಗಳಲ್ಲಿ ಕೇವಲ 22 ರನ್ ಗಳಿಸಿದ್ದಾರೆ. ಧವನ್ ಹಾಗೂ ರಾಯುಡು ಅವರ ಬ್ಯಾಟಿಂಗ್ ಚಿಂತೆಯ ವಿಚಾರವಾಗಿದೆ. ವಿಶ್ವಕಪ್‌ಗೆ ಈ ಇಬ್ಬರು ಆಟಗಾರರು ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.
ಕನ್ನಡಿಗ ಕೆ.ಎಲ್. ರಾಹುಲ್ 4ನೇ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ. ಆದರೆ ಅವರು ಧವನ್ ಅಥವಾ ರಾಯುಡುರಿಂದ ತೆರವಾದ ಸ್ಥಾನವನ್ನು ತುಂಬುತ್ತಾರೋ ಎಂಬ ಕುರಿತು ಸ್ಪಷ್ಟತೆಯಿಲ್ಲ. ಆಸ್ಟ್ರೇಲಿಯ ತಂಡ ಸರಣಿಯಲ್ಲಿ ಈ ತನಕ ಆಡಿರುವ ಮೂರೂ ಪಂದ್ಯಗಳಲ್ಲಿ ಬಲಿಷ್ಠ ಭಾರತ ತಂಡಕ್ಕೆ ತೀವ್ರ ಪೈಪೋಟಿ ನೀಡಿದ್ದು ರಾಂಚಿಯಲ್ಲಿ ಕೊನೆಗೂ ಗೆಲುವಿನ ಮುಖ ಕಂಡಿದೆ. ನಾಯಕ, ಆರಂಭಿಕ ಆಟಗಾರ ಆ್ಯರೊನ್ ಫಿಂಚ್ ಮೊದಲಿನ ಲಯಕ್ಕೆ ಮರಳುತ್ತಿದ್ದಾರೆ. ಆಸ್ಟ್ರೇಲಿಯ 4ನೇ ಪಂದ್ಯದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ.
ಭಾರತ(ಸಂಭಾವ್ಯ)
►ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ(ನಾಯಕ), ಅಂಬಟಿ ರಾಯುಡು, ರಿಷಭ್ ಪಂತ್(ವಿಕೆಟ್‌ಕೀಪರ್), ಕೇದಾರ್ ಜಾಧವ್, ವಿಜಯ ಶಂಕರ್, ಭುವನೇಶ್ವರ ಕುಮಾರ್, ಕುಲದೀಪ್ ಯಾದವ್, ಯಜುವೇಂದ್ರ ಚಹಾಲ್, ಮುಹಮ್ಮದ್ ಶಮಿ/ಬುಮ್ರಾ.
► ಆಸ್ಟ್ರೇಲಿಯ(ಸಂಭಾವ್ಯ)
ಉಸ್ಮಾನ್ ಖ್ವಾಜಾ, ಆ್ಯರೊನ್ ಫಿಂಚ್(ನಾಯಕ), ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್‌ಕಾಂಬ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋನಿಸ್, ಅಲೆಕ್ಸ್ ಕಾರೆ, ಪ್ಯಾಟ್ ಕಮಿನ್ಸ್, ನಥಾನ್ ಲಿಯೊನ್, ರಿಚರ್ಡ್‌ಸನ್, ಆ್ಯಡಮ್ ಝಾಂಪ.