ನಾಲ್ಕನೇ ಏಕದಿನ: ಆಸ್ಟ್ರೇಲಿಯ ಗೆಲುವಿಗೆ 359 ರನ್ ಸವಾಲು
Update: 2019-03-10 17:23 IST
ಮೊಹಾಲಿ, ಮಾ.10: ಆರಂಭಿಕ ಆಟಗಾರರಾದ ಶಿಖರ್ ಧವನ್(143,115 ಎಸೆತ) ಹಾಗೂ ರೋಹಿತ್ ಶರ್ಮಾ(95,92 ಎಸೆತ)ಮೊದಲ ವಿಕೆಟ್‌ಗೆ ಸೇರಿಸಿದ 193 ರನ್ ಜೊತೆಯಾಟದ ನೆರವಿನಿಂದ ಭಾರತ ತಂಡ ನಾಲ್ಕನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯ ಗೆಲುವಿಗೆ 359 ರನ್ ಗುರಿ ನೀಡಿದೆ.
ಟಾಸ್ ಜಯಿಸಿದ ಭಾರತ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿದ ಧವನ್-ರೋಹಿತ್ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟರು. ಈ ಇಬ್ಬರು ಔಟಾದ ಬಳಿಕ ಉಳಿದ ದಾಂಡಿಗರು ದೊಡ್ಡ ಮೊತ್ತ ಗಳಿಸದಿದ್ದರೂ ಭಾರತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 358 ರನ್ ಕಲೆ ಹಾಕುವಲ್ಲಿ ಯಶಸ್ವಿಯಾಯಿತು.
ರಿಷಭ್ ಪಂತ್(36, 24 ಎಸೆತ), ಕೆಎಲ್ ರಾಹುಲ್(26, 31 ಎಸೆತ), ವಿಜಯ ಶಂಕರ್(26, 15 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ಆಸ್ಟ್ರೇಲಿಯದ ಪರ ವೇಗದ ಬೌಲರ್ ಪ್ಯಾಟ್ ಕಮಿನ್ಸ್(5-70) ಐದು ವಿಕೆಟ್ ಗೊಂಚಲು ಪಡೆದರು. ರಿಚರ್ಡ್‌ಸನ್ 85 ರನ್‌ಗೆ 3 ವಿಕೆಟ್ ಉರುಳಿಸಿದರು.