×
Ad

ಭಾರತ ‘ಬಿ’ ಮಡಿಲಿಗೆ ಚತುಷ್ಕೋನ ಸರಣಿ

Update: 2019-03-11 23:38 IST

ತಿರುವನಂತಪುರ, ಮಾ.11: ಭಾರತ ‘ಎ’ ತಂಡವನ್ನು ಫೈನಲ್ ಪಂದ್ಯದಲ್ಲಿ 72 ರನ್‌ಗಳಿಂದ ಮಣಿಸಿದ ಭಾರತ ‘ಬಿ’ ತಂಡ ಸೋಮವಾರ ಅಂಡರ್-19 ಚತುಷ್ಕೋನ ಸರಣಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ‘ಬಿ’ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿತು. ಆ ಬಳಿಕ ‘ಎ’ ತಂಡವನ್ನು 38.3 ಓವರ್‌ಗಳಲ್ಲಿ 160 ರನ್‌ಗೆ ಆಲೌಟ್ ಮಾಡಿತು. ಭಾರತ ‘ಬಿ’ ಪರ ಬ್ಯಾಟಿಂಗ್‌ನಲ್ಲಿ ಮಿಂಚಿದ ನಾಯಕ ರಾಹುಲ್ ಚಾಂಡ್ರೊಲ್ (70) ಹಾಗೂ ಸಮೀರ್ ರಿಝ್ವಿ (67) ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಮಧ್ಯಮವೇಗಿ ಸುಶಾಂತ್ ಮಿಶ್ರಾ (41ಕ್ಕೆ 4) ತಂಡ ಟ್ರೋಫಿ ಜಯಿಸಲು ಕಾರಣವಾದರು.

ಭಾರತ ‘ಬಿ’ ಪರ ತಿಲಕ್ ವರ್ಮಾ ಕೂಡ ಬ್ಯಾಟಿಂಗ್‌ನಲ್ಲಿ (38) ಉತ್ತಮ ಕಾಣಿಕೆ ನೀಡಿದರು. 233 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ‘ಎ’ ತಂಡ, ‘ಬಿ’ ಬೌಲರ್‌ಗಳಿಗೆ ಸವಾಲಾಗಲೇ ಇಲ್ಲ. ಒಂದು ಹಂತದಲ್ಲಿ 90 ರನ್‌ಗೆ 7 ವಿಕೆಟ್ ಕಳೆದುಕೊಂಡು ಭಾರೀ ಸಂಕಷ್ಟಕ್ಕೆ ಸಿಲುಕಿದ್ದ ‘ಎ’ ಬಳಿಕ ನಾಯಕ ಶುಭಾಂಗ್ ಹೆಗ್ಡೆ ತೋರಿದ ಅಲ್ಪ ಪ್ರತಿರೋಧದ (42) ಕಾರಣ ಚೇತರಿಸಿಕೊಂಡಿತು. ಆದರೆ ಸೋಲು ತಪ್ಪಿಸಲಾಗಲಿಲ್ಲ. ಅಂತಿಮವಾಗಿ 38.3 ಓವರ್‌ಗಳಲ್ಲಿ 160ಕ್ಕೆ ಎಲ್ಲ ವಿಕೆಟ್ ಕಳೆದುಕೊಂಡಿತು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ಅಂಡರ್-19 ತಂಡ ಅಫ್ಘಾನಿಸ್ತಾನ ತಂಡವನ್ನು 55 ರನ್‌ಗಳಿಂದ ಮಣಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News