×
Ad

ಕರ್ನಾಟಕ- ಮಹಾರಾಷ್ಟ್ರ ಫೈನಲ್‌ ಹಣಾಹಣಿ

Update: 2019-03-12 23:57 IST

ಇಂದೋರ್, ಮಾ.12: ತಮ್ಮ ಕೊನೆಯ ಸೂಪರ್ ಲೀಗ್ ಪಂದ್ಯಗಳನ್ನು ಜಯಿಸಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿರುವ ಕರ್ನಾಟಕ ಹಾಗೂ ಮಹಾರಾಷ್ಟ್ರ ತಂಡಗಳು ಗುರುವಾರ ಇಲ್ಲಿನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆಯಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್‌ನಲ್ಲಿ ಸೆಣಸಾಡಲಿವೆ.

ಬಿ ಗುಂಪಿನ ತನ್ನ ಕೊನೆಯ ಸೂಪರ್ ಲೀಗ್ ಪಂದ್ಯದಲ್ಲಿ ಮುಂಬೈ ತಂಡ ಉತ್ತರಪ್ರದೇಶ ತಂಡವನ್ನು ಸೋಲಿಸಿದ ಹೊರತಾಗಿಯೂ ಪ್ರಮುಖ ದೇಶೀಯ ಟ್ವೆಂಟಿ-20 ಟೂರ್ನಮೆಂಟ್‌ನ ಫೈನಲ್‌ನಲ್ಲಿ ಸ್ಥಾನ ಪಡೆಯಲು ವಿಫಲವಾಯಿತು.

ಮಂಗಳವಾರ ನಡೆದ ತನ್ನ ಅಂತಿಮ ಲೀಗ್ ಪಂದ್ಯಗಳಲ್ಲಿ ಮಹಾರಾಷ್ಟ್ರ ತಂಡ ರೈಲ್ವೇಸ್‌ನ್ನು ಸೋಲಿಸಿ ಎ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದರೆ, ವಿದರ್ಭ ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸಿದ ಕರ್ನಾಟಕ ‘ಬಿ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆಯಿತು. ಎ ಹಾಗೂ ಬಿ ಗುಂಪಿನಲ್ಲಿ ತಲಾ 16 ಅಂಕಗಳನ್ನು ಬಾಚಿಕೊಂಡ ಉಭಯ ತಂಡಗಳು ಫೈನಲ್‌ಗೆ ಅರ್ಹತೆ ಪಡೆದವು.

ವಿದರ್ಭ ವಿರುದ್ಧ ಗೆಲುವಿನೊಂದಿಗೆ ಕರ್ನಾಟಕ ಟಿ-20 ಮಾದರಿ ಕ್ರಿಕೆಟ್‌ನಲ್ಲಿ ಸತತ 13ನೇ ಜಯ ದಾಖಲಿಸಿ ಹೊಸ ದಾಖಲೆ ನಿರ್ಮಿಸಿದ ಭಾರತದ ಮೊದಲ ರಾಜ್ಯ ತಂಡ ಎನಿಸಿಕೊಂಡಿತು. ಕರ್ನಾಟಕ ಕಳೆೆದ ವರ್ಷ ಇದೇ ಟೂರ್ನಿಯಲ್ಲಿ ಸೂಪರ್ ಲೀಗ್‌ನ ಕೊನೆಯ 2 ಪಂದ್ಯಗಳನ್ನು ಜಯಿಸಿತ್ತು. ಈ ವರ್ಷ ಆಡಿರುವ ಎಲ್ಲ 11 ಪಂದ್ಯಗಳಲ್ಲಿ ಜಯ ಸಾಧಿಸಿ ಅಜೇಯ ಗೆಲುವಿನ ಓಟ ಮುಂದುವರಿಸಿತು.

ಭಾರತದಲ್ಲಿನ ದೇಶೀಯ ದಾಖಲೆ ಐಪಿಎಲ್‌ನ ಕೋಲ್ಕತಾ ನೈಟ್ ರೈಡರ್ಸ್ ತಂಡದ ಹೆಸರಲ್ಲಿದೆ. ಆ ತಂಡ 2014ರಲ್ಲಿ ಸಿಎಲ್ ಟಿ-20 ಸಹಿತ ಸತತ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ವೇಳೆ, ಕರ್ನಾಟಕ ತಂಡ ಫೈನಲ್‌ನಲ್ಲಿ ಮಹಾರಾಷ್ಟ್ರವನ್ನು ಮಣಿಸಿದರೆ ಕೋಲ್ಕತಾದ ದಾಖಲೆಯನ್ನು ಸರಿಗಟ್ಟಬಹುದು.

►ಮಹಾರಾಷ್ಟ್ರ ವಿರುದ್ಧ ಹಳಿ ತಪ್ಪಿದ ರೈಲ್ವೇಸ್

ಟೂರ್ನಿಯ ಸೂಪರ್ ಲೀಗ್ ‘ಎ’ ಗುಂಪಿನ ಪಂದ್ಯದಲ್ಲಿ ಮಹಾರಾಷ್ಟ್ರ ತಂಡ ರೈಲ್ವೇಸ್‌ನ್ನು 21 ರನ್‌ಗಳ ಅಂತರದಿಂದ ಮಣಿಸಿ ಫೈನಲ್‌ಗೆ ತೇರ್ಗಡೆಯಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ಮಹಾರಾಷ್ಟ್ರ ತಂಡ ನಿಖಿಲ್ ನಾಯಕ್(ಔಟಾಗದೆ 95,58 ಎಸೆತ) ಹಾಗೂ ನೌಶಾದ್ ಶೇಖ್(59,39 ಎಸೆತ)ಅರ್ಧಶತಕದ ಕೊಡುಗೆ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 177 ರನ್ ಗಳಿಸಿತು. ಗೆಲ್ಲಲು ಸವಾಲಿನ ಮೊತ್ತ ಪಡೆದ ರೈಲ್ವೇಸ್‌ಗೆ ಮೃಣಾಲ್ ದೇವಧರ್(55,44 ಎಸೆತ) ಹಾಗೂ ಪ್ರಥಮ್ ಸಿಂಗ್(29,18 ಎಸೆತ)ಮೊದಲ ವಿಕೆಟ್‌ಗೆ 68 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಆದಾಗ್ಯೂ ರೈಲ್ವೇಸ್ 20 ಓವರ್‌ಗಳಲ್ಲಿ 156 ರನ್‌ಗೆ ಆಲೌಟಾಗಿ 21 ರನ್‌ಗಳಿಂದ ಸೋಲುಂಡಿತು.

ಎಡಗೈ ಮಧ್ಯಮ ವೇಗಿ ಸಮದ್ ಫಲ್ಲಾಹ್(3-37) ಯಶಸ್ವಿ ಬೌಲರ್ ಎನಿಸಿಕೊಂಡರೆ, ಸತ್ಯಜಿತ್ ಬಚ್ಚಾವ್(2-22), ದಿವ್ಯಾಂಗ್ ಹಿಮ್‌ಗಾನೇಕರ್(2-26) ಹಾಗೂ ನೌಶಾದ್ ಶೇಖ್(2-8) ತಲಾ 2 ವಿಕೆಟ್ ಪಡೆದು ಮಹಾರಾಷ್ಟ್ರ ಸೂಪರ್ ಲೀಗ್‌ನಲ್ಲಿ ಅಜೇಯ ದಾಖಲೆ ಕಾಯ್ದುಕೊಳ್ಳಲು ನೆರವಾದರು.

ಮಿಂಚಿದ ಮನೀಷ್, ವಿದರ್ಭಕ್ಕೆ ಸೋಲುಣಿಸಿದ ಕರ್ನಾಟಕ: ಸೂಪರ್ ಲೀಗ್‌ನ ‘ಎ’ ಗುಂಪಿನ ಪಂದ್ಯದಲ್ಲಿ ರಣಜಿ ಟ್ರೋಫಿ ಚಾಂಪಿಯನ್ ವಿದರ್ಭವನ್ನು ಆರು ವಿಕೆಟ್‌ಗಳಿಂದ ಸದೆಬಡಿದ ಕರ್ನಾಟಕ ಅಜೇಯ ಗೆಲುವಿನ ದಾಖಲೆಯೊಂದಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತು.

ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಕರ್ನಾಟಕದ ನಾಯಕ ಮನೀಷ್ ಪಾಂಡೆ ವಿದರ್ಭ ತಂಡವನ್ನು ಮೊದಲಿಗೆ ಬ್ಯಾಟಿಂಗ್‌ಗೆ ಇಳಿಸಿದರು. ನಾಯಕನ ನಿರ್ಧಾರ ಸಮರ್ಥಿಸಿದ ವಿನಯ ಕುಮಾರ್(2-27)ನೇತೃತ್ವದ ಬೌಲರ್‌ಗಳು ವಿದರ್ಭ ತಂಡವನ್ನು 7 ವಿಕೆಟ್‌ಗೆ 138 ರನ್‌ಗೆ ನಿಯಂತ್ರಿಸಿದರು. ವಿದರ್ಭ ತಂಡ 46ಕ್ಕೆ 5 ವಿಕೆಟ್‌ಗಳನ್ನು ಕಳೆದುಕೊಂಡಾಗ ಜೊತೆಯಾದ ಕೆಳ ಕ್ರಮಾಂಕದ ಆಟಗಾರರಾದ ಅಪೂರ್ವ್ ವಾಂಖಡೆ(ಔಟಾಗದೆ 56, 41 ಎಸೆತ) ಹಾಗೂ ಅಕ್ಷಯ್ ಕರ್ನೆವಾರ್(33,27 ಎಸೆತ)ಒಂದಷ್ಟು ಹೋರಾಟ ನೀಡಿ ಗೌರವಾರ್ಹ ಮೊತ್ತ ಗಳಿಸಲು ನೆರವಾದರು.

ಗೆಲ್ಲಲು ಸುಲಭ ಸವಾಲನ್ನೇ ಪಡೆದ ಕರ್ನಾಟಕ ತಂಡಕ್ಕೆ ಅಗ್ರ ಕ್ರಮಾಂಕದಲ್ಲಿ ರೋಹನ್ ಕದಮ್(39, 37 ಎಸೆತ) ಹಾಗೂ ಮಧ್ಯಮ ಕ್ರಮಾಂಕದಲ್ಲಿ ನಾಯಕ ಪಾಂಡೆ(ಔಟಾಗದೆ 49, 35 ಎಸೆತ)ಆಧಾರವಾದರು. ಕರ್ನಾಟಕ 68 ರನ್‌ಗೆ 3 ವಿಕೆಟ್ ಕಳೆದುಕೊಂಡಿತು. ಆಗ ಕ್ರೀಸ್ ಆಕ್ರಮಿಸಿಕೊಂಡ ಪಾಂಡೆ 35 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಿಡಿಸಿ ಇನ್ನೂ 4 ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಲು ನೆರವಾದರು.

►ಸೂಪರ್ ಲೀಗ್‌ನಲ್ಲಿ ಮುಂಬೆ ಹ್ಯಾಟ್ರಿಕ್

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಮುಂಬೈ ತಂಡ ಸಿದ್ದೇಶ್ ಲಾಡ್ ಹಾಗೂ ವೇಗದ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಉತ್ತರಪ್ರದೇಶ ತಂಡವನ್ನು 46 ರನ್‌ಗಳಿಂದ ಸೋಲಿಸಿತು. ಸೂಪರ್ ಲೀಗ್ ಹಂತದಲ್ಲಿ ಸತತ ಮೂರನೇ ಜಯ ದಾಖಲಿಸಿತು. ಆಲ್‌ರೌಂಡ್ ಪ್ರದರ್ಶನ ನೀಡಿದ ಲಾಡ್ ಮೊದಲಿಗೆ 44 ಎಸೆತಗಳಲ್ಲಿ 62 ರನ್ ಗಳಿಸಿದರೆ, ಆಫ್ ಸ್ಪಿನ್ ಬೌಲಿಂಗ್‌ನ ಮೂಲಕ 3 ವಿಕೆಟ್‌ಗಳನ್ನು ಉರುಳಿಸಿದರು. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಆರಂಭಿಕ ಆಟಗಾರ ಜೈ ಬಿಶ್ತ್‌ರನ್ನು ಕಳೆದುಕೊಂಡಿತು. ಆಗ ಏಕನಾಥ್ ಕೇಳ್ಕರ್‌ರೊಂದಿಗೆ ಕೈಜೋಡಿಸಿದ ಲಾಡ್ 2ನೇ ವಿಕೆಟ್‌ಗೆ 96 ರನ್ ಜೊತೆಯಾಟ ನಡೆಸಿದರು. ನಾಯಕ ಶ್ರೇಯಸ್ ಅಯ್ಯರ್ ಉಪಯುಕ್ತ ಕಾಣಿಕೆ(43, 27 ಎಸೆತ) ನೀಡಿ ತಂಡದ ಮೊತ್ತವನ್ನು 7 ವಿಕೆಟ್ ನಷ್ಟಕ್ಕೆ 183 ರನ್‌ಗೆ ತಲುಪಿಸಿದರು.

ಚೇಸಿಂಗ್ ವೇಳೆ ಆರಂಭದಲ್ಲೇ ಎಡವಿದ ಉತ್ತರಪ್ರದೇಶ ಮೊದಲ ಆರು ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡಿತು. ಆರು ದಾಂಡಿಗರು ಒಂದಂಕಿ ಗಳಿಸಿ ಔಟಾದರು. ಲಾಡ್, ಶಾರ್ದೂಲ್ ಠಾಕೂರ್ ಹಾಗೂ ಶಿವಂ ದುಬೆ ತಲಾ 3 ವಿಕೆಟ್‌ಗಳನ್ನು ಕಬಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News