ಬಾಂಗ್ಲಾ ಕಿವಿ ಹಿಂಡಿದ ಕಿವೀಸ್‌ಗೆ ಸರಣಿ
ವೆಲ್ಲಿಂಗ್ಟನ್, ಮಾ.12: ವೇಗದ ಬೌಲರ್ ನೀಲ್ ವ್ಯಾಗ್ನರ್ ಬೌಲಿಂಗ್ ದಾಳಿಗೆ ದಿಕ್ಕಾಪಾಲಾದ ಬಾಂಗ್ಲಾ ಮಳೆಬಾಧಿತ 2ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಇನಿಂಗ್ಸ್ ಹಾಗೂ 12 ರನ್‌ಗಳಿಂದ ಮಣಿದಿದೆ. ಆ ಮೂಲಕ 3 ಟೆಸ್ಟ್‌ಗಳಸರಣಿಯಲ್ಲಿ ಕಿವೀಸ್ 2-0ಯಿಂದ ಮುನ್ನಡೆಯಲ್ಲಿದೆ.
ಮಳೆಯ ಕಾರಣ ಮೊದಲೆರಡು ದಿನದಾಟ ಸಂಪೂರ್ಣ ರದ್ದುಗೊಂಡಿದ್ದ ಪಂದ್ಯದಲ್ಲಿ ಮೂರನೇ ದಿನವಷ್ಟೇ ಆಟ ಆರಂಭಗೊಂಡಿತ್ತು. ವ್ಯಾಗ್ನರ್‌ರ ಶಾರ್ಟ್ ಪಿಚ್ ಎಸೆತಗಳಿಗೆ ಉತ್ತರಿಸಲಾಗದೆ ಪ್ರವಾಸಿ ಆಟಗಾರರು ಸೋಲೊಪ್ಪಿಕೊಂಡರು.
ವ್ಯಾಗ್ನರ್ (45ಕ್ಕೆ 5 ವಿಕೆಟ್) ಐದು ವಿಕೆಟ್ ಗೊಂಚಲು ಪಡೆದು ಬಾಂಗ್ಲಾವನ್ನು ಎರಡನೇ ಇನಿಂಗ್ಸ್‌ನಲ್ಲಿ 209 ರನ್‌ಗಳಿಗೆ ಸರ್ವಪತನಗೊಳಿಸಿದರು. ಬಾಂಗ್ಲಾ ಪರ ನಾಯಕ ಮಹ್ಮುದುಲ್ಲಾ ರಿಯಾದ್ (67) ಹಾಗೂ ಮುಹಮ್ಮದ್ ಮಿಥುನ್ (47) ಅಲ್ಪ ಪ್ರತಿರೋಧ ತೋರಿದರು. ಪ್ರಥಮ ಟೆಸ್ಟ್‌ನಲ್ಲೂಆತಿಥೇಯರನ್ನು ಕಾಡಿದ್ದ ವ್ಯಾಗ್ನರ್ ಕಿವೀಸ್ ಇನಿಂಗ್ಸ್ ಹಾಗೂ 52 ರನ್‌ಗಳಿಂದ ಪಂದ್ಯ ಜಯಿಸುವಂತೆ ಮಾಡಿದ್ದರು.
5ನೇ ದಿನದಾಟವಾದ ಮಂಗಳವಾರ 3 ವಿಕೆಟ್‌ಗೆ 80 ರನ್‌ಗಳೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಬಾಂಗ್ಲಾಗೆ ಬೌಲ್ಟ್ (52ಕ್ಕೆ 4) ಆರಂಭದಲ್ಲೇ ಸೌಮ್ಯ ಸರ್ಕಾರ್ (28) ಅವರನ್ನು ಔಟ್ ಮಾಡುವ ಮೂಲಕ ಆಘಾತ ನೀಡಿದರು. ಆ ಬಳಿಕ ವ್ಯಾಗ್ನರ್ ಬಾಂಗ್ಲಾ ಬ್ಯಾಟಿಂಗ್ ಮೇಲೆ ಪ್ರಹಾರ ಮಾಡಿದರು.