ಟಾಪ್ ಯೋಜನೆಯಿಂದ ಕುಸ್ತಿಪಟು ರಿತು ಹೊರಕ್ಕೆ

Update: 2019-03-20 04:26 GMT

ಹೊಸದಿಲ್ಲಿ, ಮಾ.19: ಮಿಕ್ಸೆಡ್ ಮಾರ್ಷಲ್ ಆರ್ಟ್ಸ್(ಎಂ.ಎಂ.ಎ)ಗೆ ಸೇರಲು ನಿರ್ಧರಿಸಿರುವ ಕುಸ್ತಿಪಟು ರಿತು ಪೋಗಟ್ ಅವರನ್ನು ಸರಕಾರದ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಯೋಜನೆಯಿಂದ (ಟಾಪ್ಸ್) ಕೈಬಿಡಲಾಗಿದೆ. ಪ್ರಸಿದ್ಧ ಕುಸ್ತಿ ಕುಟುಂಬವಾದ ಪೋಗಟ್ ಸಹೋದರಿಯಲ್ಲಿ ಅತೀ ಕಿರಿಯವರಾದ ರಿತು 2020ರ ಒಲಿಂಪಿಕ್ಸ್‌ಗೆ ತಾನು ಅಲಭ್ಯವಾಗಲು ಹಾಗೂ ಸಿಂಗಾಪುರದಲ್ಲಿ ಎಂ.ಎಂ.ಎ.ಗೆ ಸೇರಲು ನಿರ್ಧರಿಸಿದ ಕಾರಣ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಅವರನ್ನು ಟಾಪ್ ಯೋಜನೆಯಿಂದ ಹೊರಗಿಟ್ಟಿದೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬಂಗಾರ ಹಾಗೂ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿದ ಪದಕ ಜಯಿಸಿರುವ ರಿತು, ಆಮಿರ್‌ಖಾನ್ ನಟನೆಯ ಜನಪ್ರಿಯ ಬಾಲಿವುಡ್ ಸಿನೆಮಾ ‘ದಂಗಲ್’ ನಿಂದ ಮುನ್ನೆಲೆಗೆ ಬಂದಿರುವ ಪೋಗಟ್ ಕುಟುಂಬದ ಗೀತಾ ಹಾಗೂ ಬಬಿತಾ ಅವರ ಕಿರಿಯ ಸಹೋದರಿಯಾಗಿದ್ದಾರೆ. ಸಾಯ್‌ನ ಪ್ರಧಾನ ನಿರ್ದೇಶಕ ನೀಲಮ್ ಕಪೂರ್ ಹಾಗೂ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ (ಐಒಎ) ನರೇಂದರ್ ಬಾತ್ರಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇನ್ನೊಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಐವರು ಪ್ಯಾರಾ ಬ್ಯಾಡ್ಮಿಂಟನ್ ಆಟಗಾರರನ್ನು ಟೋಕಿಯೊ ಪ್ಯಾರಾಲಿಂಪಿಕ್ಸ್ ಗೇಮ್ಸ್‌ಗಾಗಿ ಟಾಪ್ಸ್ ಯೋಜನೆಯಲ್ಲಿ ಸೇರಿಸಲಾಗಿದೆ.

ಮನೋಜ್ ಸರ್ಕಾರ್ ಮತ್ತು ಪ್ರಮೋದ್ ಭಗತ್ (ಪುರುಷರ ಸಿಂಗಲ್ಸ್ -ಎಸ್‌ಎಲ್3 ವಿಭಾಗ) ಸುಕಾಂತ್ ಕದಮ್, ತರುಣ್ ಮತ್ತು ಸುಹಾಸ್ ಯತಿರಾಜ್ (ಪುರುಷರ ಸಿಂಗಲ್ಸ್- ಎಸ್‌ಎಲ್4 ವಿಭಾಗ) ಅವರನ್ನು ಅರ್ಹ ಪ್ಯಾರಾ ಬ್ಯಾಡ್ಮಿಂಟನ್ ತಾರೆಗಳೆಂದು ಗುರುತಿಸಿ ಟಾಪ್ಸ್‌ಗೆ ಸೇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News