‘ಅಲ್ಲಾಹು ಅಕ್ಬರ್’: ಪತನಗೊಂಡ ಲಯನ್ ಏರ್ ಪೈಲಟ್‌ನ ಕೊನೆಯ ಮಾತುಗಳಿವು…

Update: 2019-03-20 16:46 GMT
ಸಾಂದರ್ಭಿಕ ಚಿತ್ರ

ಜಕಾರ್ತ, ಮಾ. 20: ಕಳೆದ ವರ್ಷ ಅಪಘಾತಕ್ಕೀಡಾದ ಇಂಡೋನೇಶ್ಯದ ಲಯನ್ ಏರ್ ವಿಮಾನಯಾನ ಸಂಸ್ಥೆಯ ‘ಬೋಯಿಂಗ್ 737 ಮ್ಯಾಕ್ಸ್’ ವಿಮಾನವು ಕೆಳಮುಖವಾಗಿ ಯಾಕೆ ಧಾವಿಸುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ವಿಫಲರಾದ ಪೈಲಟ್‌ಗಳು, ಅದನ್ನು ಸರಿಪಡಿಸಲು ಮಾಹಿತಿ ಪುಸ್ತಕವನ್ನು ಜಾಲಾಡಿದ್ದರು.

ಆದರೆ, ಅದಾಗಲೇ ಸಮಯ ಮೀರಿತ್ತು ಹಾಗೂ ವಿಮಾನ ಜಾವಾ ಸಮುದ್ರಕ್ಕೆ ಅಪ್ಪಳಿಸಿತ್ತು ಎಂದು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಬಗ್ಗೆ ಮಾಹಿತಿಯಿರುವ ಮೂವರು ವ್ಯಕ್ತಿಗಳು ಹೇಳಿದ್ದಾರೆ.

 ಅಕ್ಟೋಬರ್ 29ರಂದು ನಡೆದ ಆ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲ 189 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಕಳೆದ ವಾರ ಇಥಿಯೋಪಿಯದಲ್ಲಿ ಇದೇ ಮಾದರಿಯ ಇನ್ನೊಂದು ವಿಮಾನ ಪತನಗೊಂಡ ಹಿನ್ನೆಲೆಯಲ್ಲಿ, ಲಯನ್ ಏರ್ ವಿಮಾನ ಅಪಘಾತದ ಕುರಿತ ತನಿಖೆ ಮುನ್ನೆಲೆಗೆ ಬಂದಿದೆ.

 ಇಥಿಯೋಪಿಯನ್ ಏರ್‌ಲೈನ್ಸ್‌ಗೆ ಸೇರಿದ ವಿಮಾನವು ಮಾರ್ಚ್ 10ರಂದು ಇಥಿಯೋಪಿಯ ರಾಜಧಾನಿ ಅಡಿಸ್ ಅಬಾಬದ ಹೊರವಲಯದಲ್ಲಿ ಪತನಗೊಂಡ ಬಳಿಕ, ಬಹುತೇಕ ಎಲ್ಲ ದೇಶಗಳು ವಿಮಾನ ನಿರ್ಮಾಣ ಕಂಪೆನಿ ಬೋಯಿಂಗ್‌ನ ‘737 ಮ್ಯಾಕ್ಸ್’ ಮಾದರಿಯ ವಿಮಾನಗಳನ್ನು ಸೇವೆಯಿಂದ ಹೊರಗಿಟ್ಟಿರುವುದನ್ನು ಸ್ಮರಿಸಬಹುದಾಗಿದೆ.

ಇಥಿಯೋಪಿಯನ್ ಏರ್‌ಲೈನ್ಸ್ ವಿಮಾನ ಪತನದಲ್ಲಿ ವಿಮಾನದಲ್ಲಿದ್ದ ಎಲ್ಲ 157 ಮಂದಿ ಮೃತಪಟ್ಟಿದ್ದಾರೆ.

ವಿಮಾನ ನಿಯಂತ್ರಣದಲ್ಲಿ ಸಮಸ್ಯೆಯಿದೆ ಎಂದಿದ್ದ ಪೈಲಟ್

ದೋಷಪೂರ್ಣ ಸೆನ್ಸರ್‌ನಿಂದ ಪಡೆದ ದತ್ತಾಂಶಕ್ಕೆ ಸ್ಪಂದಿಸಿ, ಕೆಳಮುಖವಾಗಿ ಹೋಗುವಂತೆ ವಿಮಾನಕ್ಕೆ ಕಂಪ್ಯೂಟರ್ ಹೇಗೆ ಆದೇಶ ನೀಡಿತು ಹಾಗೂ ತುರ್ತು ಪರಿಸ್ಥಿತಿಗೆ ಸೂಕ್ತವಾಗಿ ಸ್ಪಂದಿಸಲು ಪೈಲಟ್‌ಗಳು ಸಾಕಷ್ಟು ತರಬೇತಿ ಹೊಂದಿದ್ದರೆ ಎಂಬ ಅಂಶಗಳ ಬಗ್ಗೆ ಲಯನ್ ಏರ್ ವಿಮಾನ ಪತನದ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಜಕಾರ್ತ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೇವಲ ಎರಡು ನಿಮಿಷಗಳಲ್ಲಿ, ‘ವಿಮಾನ ನಿಯಂತ್ರಣದಲ್ಲಿ ಸಮಸ್ಯೆ ಇದೆ’ ಎಂಬುದಾಗಿ ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ ಓರ್ವ ಪೈಲಟ್ ಮಾಹಿತಿ ನೀಡಿದ್ದರು.

ತಕ್ಷಣದ ಮಾಹಿತಿಗಾಗಿ ಇರುವ ಪುಸ್ತಕವನ್ನು ಪರಿಶೀಲಿಸುವಂತೆ ವಿಮಾನದ ಕ್ಯಾಪ್ಟನ್ ಇನ್ನೋರ್ವ ಪೈಲಟ್‌ಗೆ ಸೂಚಿಸಿದ್ದರು.

ಮುಂದಿನ 9 ನಿಮಿಷಗಳ ಕಾಲ, ತಾನು ಸ್ತಬ್ಧವಾಗಿರುವುದಾಗಿ ವಿಮಾನ ಪೈಲಟ್‌ಗಳಿಗೆ ಎಚ್ಚರಿಸಿದೆ ಹಾಗೂ ಅದಕ್ಕೆ ಪ್ರತಿಯಾಗಿ ಮುಖವನ್ನು ಕೆಳಗೆ ತಿರುಗಿಸಿದೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.

ವಿಮಾನವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಕಂಪ್ಯೂಟರ್!

ಕ್ಯಾಪ್ಟನ್ ವಿಮಾನವನ್ನು ಮೇಲ್ಮುಖವಾಗಿ ತಿರುಗಿಸಲು ಹತಾಶ ಪ್ರಯತ್ನಗಳನ್ನು ಮಾಡುತ್ತಿದ್ದರು. ಆದರೆ, ವಿಮಾನದ ಸ್ವಯಂಚಾಲಿತ ವ್ಯವಸ್ಥೆಯು, ದೋಷಪೂರ್ಣ ಸೆನ್ಸರ್‌ನಿಂದ ಪಡೆದ ಮಾಹಿತಿಯ ಆಧಾರದಲ್ಲಿ, ವಿಮಾನವು ಸ್ಥಗಿತಗೊಂಡಿದೆ ಎಂದು ಭಾವಿಸಿ ವಿಮಾನದ ಮುಖವನ್ನು ಕೆಳಗೆ ತಳ್ಳುತ್ತಿತ್ತು ಎಂದು ವರದಿ ತಿಳಿಸಿದೆ.

ವಿಮಾನವನ್ನು ಸರಿದಾರಿಗೆ ತರಲು ಸಾಧ್ಯವಿಲ್ಲ ಹಾಗೂ ವಿಮಾನ ಇನ್ನೇನು ಸಮುದ್ರಕ್ಕೆ ಅಪ್ಪಳಿಸುತ್ತದೆ ಎನ್ನುವುದು ಖಚಿತವಾದಾಗ, ಸಹ ಪೈಲಟ್ ‘‘ಅಲ್ಲಾಹು ಅಕ್ಬರ್’’ ಎಂಬುದಾಗಿ ಉದ್ಘರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News