ಎರ್ದೊಗಾನ್ ಹೇಳಿಕೆಯನ್ನು ಪ್ರಶ್ನಿಸಲು ವಿದೇಶ ಸಚಿವ ಟರ್ಕಿಗೆ: ನ್ಯೂಝಿಲ್ಯಾಂಡ್ ಪ್ರಧಾನಿ ಜೆಸಿಂದಾ

Update: 2019-03-20 16:53 GMT

ವೆಲಿಂಗ್ಟನ್ (ನ್ಯೂಝಿಲ್ಯಾಂಡ್), ಮಾ. 20: ಕ್ರೈಸ್ಟ್‌ಚರ್ಚ್‌ನ ಎರಡು ಮಸೀದಿಗಳಲ್ಲಿ ನಡೆದ ಹತ್ಯಾಕಾಂಡಗಳ ಬಗ್ಗೆ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ನೀಡಿರುವ ಹೇಳಿಕೆಗಳ ಬಗ್ಗೆ ಅವರನ್ನು ‘ಪ್ರಶ್ನಿಸಲು’ ವಿದೇಶ ಸಚಿವ ವಿನ್‌ಸ್ಟನ್ ಪೀಟರ್ಸ್ ಟರ್ಕಿಗೆ ಪ್ರಯಾಣಿಸಲಿದ್ದಾರೆ ಎಂದು ನ್ಯೂಝಿಲ್ಯಾಂಡ್ ಪ್ರಧಾನಿ ಜೆಸಿಂದಾ ಆರ್ಡರ್ನ್ ಬುಧವಾರ ಹೇಳಿದ್ದಾರೆ.

‘ಬಿಳಿಯರು ಶ್ರೇಷ್ಠರು’ ಎಂದು ನಂಬುವ ಆಸ್ಟ್ರೇಲಿಯ ಪ್ರಜೆ 28 ವರ್ಷದ ಬ್ರೆಂಟನ್ ಟ್ಯಾರಂಟ್ ನಡೆಸಿದ ಹತ್ಯಾಕಾಂಡದಲ್ಲಿ ಕನಿಷ್ಠ 50 ಮಂದಿ ಅಸು ನೀಗಿದ್ದಾರೆ.

ಹಂತಕನಿಗೆ ನ್ಯೂಝಿಲ್ಯಾಂಡ್ ಶಿಕ್ಷೆ ನೀಡದಿದ್ದರೆ ಟರ್ಕಿ ನೀಡುವುದು ಎಂಬುದಾಗಿ ಎರ್ದೊಗಾನ್ ಹೇಳಿದ್ದರು.

ಮಾರ್ಚ್ 31ರಂದು ನಡೆಯಲಿರುವ ಚುನಾವಣೆಯಲ್ಲಿ ತನ್ನ ‘ಎಕೆ ಪಕ್ಷ’ದ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಲು ಅವರು ಈ ಹೇಳಿಕೆ ನೀಡಿದ್ದಾರೆ ಎಂಬುದಾಗಿ ಭಾವಿಸಲಾಗಿದೆ. ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ಆ ಸಭೆಯಲ್ಲಿ ದಾಳಿಯ ವೀಡಿಯೊ ತುಣುಕುಗಳನ್ನೂ ಪ್ರದರ್ಶಿಸಲಾಗಿತ್ತು.

ಎರ್ದೊಗಾನ್‌ರ ಹೇಳಿಕೆ ಬಗ್ಗೆ ನನ್ನ ವಿದೇಶ ಸಚಿವರು ತುರ್ತು ಸ್ಪಷ್ಟೀಕರಣ ಕೋರಲಿದ್ದಾರೆ ಎಂದು ಜೆಸಿಂದಾ ಹೇಳಿದರು.

‘‘ಎರ್ದೊಗಾನ್ ನೀಡಿರುವ ಹೇಳಿಕೆಗಳ ಬಗ್ಗೆ ನಮ್ಮ ಉಪ ಪ್ರಧಾನಿ ಟರ್ಕಿಯಲ್ಲಿ ಪ್ರಶ್ನಿಸಲಿದ್ದಾರೆ’’ ಎಂದು ಕ್ರೈಸ್ಟ್‌ಚರ್ಚ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನ್ಯೂಝಿಲ್ಯಾಂಡ್ ಪ್ರಧಾನಿ ಹೇಳಿದರು.

‘‘ಮುಖಾಮುಖಿ ಮಾತನಾಡಿ ವಿಷಯವನ್ನು ಇತ್ಯರ್ಥಪಡಿಸಲು ಅವರು ಅಲ್ಲಿಗೆ ಹೋಗಲಿದ್ದಾರೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News