ಭಾರತದ ಮುಡಿಗೆ ಸತತ ಐದನೇ ಬಾರಿ ಪ್ರಶಸ್ತಿ ಗರಿ

Update: 2019-03-22 18:25 GMT

ವಿರಾಟ್‌ನಗರ(ನೇಪಾಳ), ಮಾ.22: ಆತಿಥೇಯ ನೇಪಾಳದ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತದ ಮಹಿಳಾ ತಂಡ ಸ್ಯಾಫ್ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಪಾರಮ್ಯ ಮುಂದುವರಿಸಿ ಸತತ ಐದನೇ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಶುಕ್ರವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ನೇಪಾಳವನ್ನು 3-1 ಗೋಲುಗಳ ಅಂತರದಿಂದ ಮಣಿಸಿದೆ. ಈ ಗೆಲುವಿನೊಂದಿಗೆ ಟೂರ್ನಮೆಂಟ್‌ನ ಇತಿಹಾಸದಲ್ಲಿ ತನ್ನ ಅಜೇಯ ಗೆಲುವಿನ ಓಟವನ್ನು 23 ಪಂದ್ಯಗಳಿಗೆ ವಿಸ್ತರಿಸಿದೆ.

ಸಾಹಿದ್ ರಂಗಶಾಲಾ ಸ್ಟೇಡಿಯಂನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತದ ಪರ ದಾಲಿಮಾ ಚಿಬ್ಬೆರ್, ಗ್ರೇಸ್ ಡಾಂಗ್‌ಮೆ ಹಾಗೂ ಬದಲಿ ಆಟಗಾರ್ತಿ ಅಂಜು ತಮಂಗ್ ತಲಾ ಒಂದು ಗೋಲು ದಾಖಲಿಸಿದರು.

ಬಾಂಗ್ಲಾದೇಶ ವಿರುದ್ಧ ಸೆಮಿ ಫೈನಲ್‌ನಲ್ಲಿ ದಾಲಿಮಾ ಭಾರತದ ಗೋಲಿನ ಖಾತೆ ತೆರೆದಿದ್ದರು. ಫೈನಲ್ ಪಂದ್ಯದಲ್ಲೂ ಉತ್ತಮ ಪ್ರದರ್ಶನ ಪುನರಾವರ್ತಿಸಿದ ದಾಲಿಮಾ 26ನೇ ನಿಮಿಷದಲ್ಲಿ ಫ್ರೀ-ಕಿಕ್‌ನಲ್ಲಿ ಗೋಲ್‌ಕೀಪರ್ ಕಣ್ಣು ತಪ್ಪಿಸಿ ಗೋಲು ಬಾರಿಸಿ ಹಾಲಿ ಚಾಂಪಿಯನ್ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಆರು ನಿಮಿಷಗಳ ಬಳಿಕ ರತನ್‌ಬಾಲಾ ದೇವಿ ಭಾರತದ ಮುನ್ನಡೆ ವೃದ್ಧಿಸಲು ಯತ್ನಿಸಿದರು. ಆದರೆ, ಅವರ ಪ್ರಯತ್ನವನ್ನು ನೇಪಾಳದ ಗೋಲ್‌ಕೀಪರ್ ವಿಫಲಗೊಳಿಸಿದರು.

34ನೇ ನಿಮಿಷದಲ್ಲಿ ಸಬಿತ್ರಾ ಹೆಡರ್ ಮೂಲಕ ಗೋಲು ಗಳಿಸಿ ಸ್ಕೋರನ್ನು 1-1ರಿಂದ ಸಮಬಲಗೊಳಿಸಿದರು. ಮೊದಲಾರ್ಧದ ಅಂತ್ಯಕ್ಕೆ ಉಭಯ ತಂಡಗಳು ತಲಾ ಒಂದು ಗೋಲು ಗಳಿಸಿದವು. 69ನೇ ನಿಮಿಷದಲ್ಲಿ ಭಾರತದ ಪ್ರಯತ್ನ ಫಲ ನೀಡಿದ್ದು, ಸಂಜು ಆಕರ್ಷಕ ಗೋಲು ಗಳಿಸಿ 2-1 ಮುನ್ನಡೆ ಒದಗಿಸಿಕೊಟ್ಟರು. ಕೋಚ್ ಮೈಮೊಲ್ ರಾಕಿ ದ್ವಿತೀಯಾರ್ಧದಲ್ಲಿ ಸಂಧ್ಯಾ ಬದಲಿಗೆ ಅಂಜು ತಮಂಗ್‌ಗೆ ಅವಕಾಶ ನೀಡಿದರು. ಕೋಚ್ ಅವರ ಈ ನಿರ್ಧಾರ ತಕ್ಷಣವೇ ಫಲ ನೀಡಿದ್ದು, 78ನೇ ನಿಮಿಷದಲ್ಲಿ ಅಂಜು ಭಾರತದ ಪರ ಮೂರನೇ ಆಕರ್ಷಕ ಗೋಲು ಗಳಿಸಿ 3-1 ಮುನ್ನಡೆ ಒದಗಿಸಿದರು.

ನೇಪಾಳ ಕೊನೆಯ ತನಕ ಎದುರಾಳಿಯ ರಕ್ಷಣಾಕೋಟೆಯನ್ನು ಬೇಧಿಸಲು ಯತ್ನಿಸಿದ್ದು, ಆದರೆ,ಭಾರತ ಯಾವುದಕ್ಕೂ ಜಗ್ಗದೇ ಟೂರ್ನಿಯಲ್ಲಿ ತನ್ನ ಅಜೇಯ ಓಟ ಮುಂದುವರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News