×
Ad

ಸನ್‌ರೈಸರ್ಸ್ ವಿರುದ್ಧ ಕೋಲ್ಕತ್ತಾಕ್ಕೆ ರೋಚಕ ಜಯ

Update: 2019-03-24 20:14 IST

 ಕೋಲ್ಕತಾ,ಮಾ.24: ಐಪಿಎಲ್‌ನ ಎರಡನೇ ಪಂದ್ಯದಲ್ಲಿ ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ಸಾಹಸದಿಂದ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಆರು ವಿಕೆಟ್‌ಗಳಿಂದ ರೋಚಕ ಜಯ ಸಾಧಿಸಿದೆ.

ರವಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ ತಂಡ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅರ್ಧಶತಕದ(85)ಕೊಡುಗೆ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು.

ಗೆಲ್ಲಲು ಕಠಿಣ ಸವಾಲನ್ನೇ ಪಡೆದ ಕೆಕೆಆರ್ ತಂಡ 19.4 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 183 ರನ್ ಗಳಿಸಿತು. ಕೋಲ್ಕತಾ 15.3 ಓವರ್‌ಗಳಲ್ಲಿ 118 ರನ್‌ಗೆ 4 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿತ್ತು. ಆಗ ತಂಡವನ್ನು ಆಧರಿಸಿದ ರಸೆಲ್(ಔಟಾಗದೆ 49, 19 ಎಸೆತ, 4 ಬೌಂಡರಿ, 4 ಸಿಕ್ಸರ್) ಅವರು ಸಹ ಆಟಗಾರ ಶುಭಮನ್ ಗಿಲ್(ಔಟಾಗದೆ 18, 10 ಎಸೆತ, 2 ಸಿಕ್ಸರ್)ಜೊತೆಗೂಡಿ ಇನ್ನೂ 2 ಎಸೆತ ಬಾಕಿ ಇರುವಾಗಲೇ ತಂಡಕ್ಕೆ ರೋಚಕ ಗೆಲುವು ತಂದರು.

16ನೇ ಓವರ್‌ನಲ್ಲಿ ಫ್ಲಡ್‌ಲೈಟ್ ಸಮಸ್ಯೆ ಕಂಡು ಬಂದು ಸ್ವಲ್ಪ ಸಮಯ ಪಂದ್ಯ ಸ್ಥಗಿತಗೊಂಡಿತು. ಪಂದ್ಯ ಮತ್ತೆ ಆರಂಭವಾದಾಗ ರಾಣಾ ವಿಕೆಟ್ ಒಪ್ಪಿಸಿದರು. 18 ಹಾಗೂ 19ನೇ ಓವರ್‌ನಲ್ಲಿ ಕ್ರಮವಾಗಿ 19 ಹಾಗೂ 21 ರನ್ ಕಲೆ ಹಾಕಿ ಪಂದ್ಯಕ್ಕೆ ತಿರುವು ನೀಡಿದ ರಸೆಲ್ ಕೆಕೆಆರ್‌ನ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದರು.

2ನೇ ಓವರ್‌ನಲ್ಲಿ ಆರಂಭಿಕ ಆಟಗಾರ ಲಿನ್(7) ವಿಕೆಟನ್ನು ಕಳೆದುಕೊಂಡ ಕೋಲ್ಕತಾ ಕಳಪೆ ಆರಂಭ ಪಡೆಯಿತು. ಆಗ ಎರಡನೇ ವಿಕೆಟ್‌ಗೆ 80 ರನ್ ಜೊತೆಯಾಟ ನಡೆಸಿದ ನಿತಿಶ್ ರಾಣಾ(68, 47 ಎಸೆತ, 8 ಬೌಂಡರಿ, 3 ಸಿಕ್ಸರ್) ಹಾಗೂ ರಾಬಿನ್ ಉತ್ತಪ್ಪ(35, 27 ಎಸೆತ, 3 ಬೌಂಡರಿ, 1 ಸಿಕ್ಸರ್)ತಂಡವನ್ನು ಆಧರಿಸಿದರು. ಆದರೆ ಈ ಇಬ್ಬರು ಬೇರ್ಪಟ್ಟ ಬಳಿಕ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್(2)ಅಲ್ಪ ಮೊತ್ತಕ್ಕೆ ಔಟಾದರು.

ಹೈದರಾಬಾದ್ ಪರ ಶಾಕಿಬ್ ಅಲ್ ಹಸನ್(1-42), ಸಂದೀಪ್ ಶರ್ಮಾ(1-42), ಎಸ್.ಕೌಲ್(1-35) ಹಾಗೂ ರಶೀದ್ ಖಾನ್(1-26)ತಲಾ ಒಂದು ವಿಕೆಟ್ ಪಡೆದರು.

ಹೈದರಾಬಾದ್ 181/3: ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಹೈದರಾಬಾದ್ ತಂಡಕ್ಕೆ ವಾರ್ನರ್ ಹಾಗೂ ಬೈರ್‌ಸ್ಟೋವ್(39,35 ಎಸೆತ)ಮೊದಲ ವಿಕೆಟ್‌ಗೆ 118 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಬೈರ್‌ಸ್ಟೋವ್ ಔಟಾದ ಬಳಿಕ ವಿಜಯ ಶಂಕರ್(ಔಟಾಗದೆ 40, 24 ಎಸೆತ, 2 ಬೌಂಡರಿ, 2 ಸಿಕ್ಸರ್) ತಂಡದ ಮೊತ್ತವನ್ನು 181ಕ್ಕೆ ತಲುಪಿಸಿದರು.

ಕೆಕೆಆರ್ ಪರ ರಸಲ್(2-32)ಯಶಸ್ವಿ ಬೌಲರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News