ವಿಶ್ವದಾಖಲೆ ನಿರ್ಮಿಸಿ ಚಿನ್ನ ಗೆದ್ದ ಮನು-ಸೌರಭ್
ಹೊಸದಿಲ್ಲಿ, ಮಾ.27: ಭಾರತದ ಯುವ ಶೂಟಿಂಗ್ ತಾರೆಗಳಾದ ಮನು ಭಾಕರ್ ಹಾಗೂ ಸೌರಭ್ ಚೌಧರಿ ಅರ್ಹತಾ ಸುತ್ತಿನಲ್ಲಿ ವಿಶ್ವದಾಖಲೆಯನ್ನು ಮುರಿದು 12ನೇ ಏಶ್ಯನ್ ಏರ್‌ಗನ್ ಚಾಂಪಿಯನ್‌ಶಿಪ್‌ನ 10 ಮೀ. ಏರ್ ಪಿಸ್ತೂಲ್ ವಿಭಾಗದ ಮಿಶ್ರ ತಂಡ ವಿಭಾಗದಲ್ಲಿ ಬಂಗಾರದ ಪದಕ ಗೆದ್ದುಕೊಂಡಿದ್ದಾರೆ. ದಿಲ್ಲಿಯಲ್ಲಿ ನಡೆದ ಅಂತರ್‌ರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್‌ಎಸ್‌ಎಫ್)ನ ವಿಶ್ವಕಪ್ ಹಂತದ ಇದೇ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ ಬಳಿಕ ಈ ಜೋಡಿ ತೈಪೆಯ ತಾವೊಯುವಾನ್‌ನಲ್ಲಿ ಮತ್ತೊಂದು ಸಾಧನೆ ಮಾಡಿದೆ. 17 ವರ್ಷದ ಮನು ಹಾಗೂ 16 ವರ್ಷ ವಯಸ್ಸಿನ ಸೌರಭ್ ಜೊತೆಗೂಡಿ ಅರ್ಹತಾ ಸುತ್ತಿನಲ್ಲಿ 784 ಅಂಕಗಳಿಗೆ ಗುರಿಯಿಡುವ ಮೂಲಕ 5 ದಿನಗಳ ಹಿಂದೆ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ರಶ್ಯದ ವಿಟಾಲಿನಾ ಬಟ್ಸಾರಶ್ಕಿನಾ ಹಾಗೂ ಅರ್ಟೆಮ್ ಚೆರ್ನೊಸೊವ್ ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದರು.
ಆ ಬಳಿಕ ಮನು-ಸೌರಭ್ ಜೋಡಿ ಈ ವಿಭಾಗದ ಫೈನಲ್ ಪಂದ್ಯವನ್ನು 484.8 ಅಂಕ ಗಳಿಸುವ ಮೂಲಕ ಗೆದ್ದುಕೊಂಡಿತು. ಕೊರಿಯದ ಹ್ವಾಂಗ್ ಸೆಯೊಂಗೆಮ್ ಹಾಗೂ ಕಿಮ್ ಮೋಸ್ ಜೋಡಿ 481.1 ಅಂಕ ಗಳಿಸಿ ಬೆಳ್ಳಿ ಪದಕ ಗೆದ್ದರೆ ತೈವಾನ್‌ನ ವು ಚಿಯಾ ಯಿಂಗ್-ಕೌ ಕೌನ್ ತಿಂಗ್ ಜೋಡಿಯು 413.3 ಅಂಕ ಗಳಿಸಿ ಕಂಚಿಗೆ ತೃಪ್ತಿಪಟ್ಟಿತು. ಇದೇ ವಿಭಾಗದ ಫೈನಲ್ಸ್ ತಲುಪಿದ್ದ ಭಾರತದ ಇನ್ನೊಂದು ಜೋಡಿ ಅನುರಾಧಾ-ಅಭಿಷೇಕ್ ವರ್ಮಾ 372.1 ಅಂಕಗಳೊಂದಿಗೆ ನಾಲ್ಕನೇ ಸ್ಥಾನದೊಂದಿಗೆ ಸ್ಪರ್ಧೆ ಕೊನೆಗೊಳಿಸಿತು ಎಂದು ಭಾರತದ ರಾಷ್ಟ್ರೀಯ ರೈಫಲ್ ಅಸೋಸಿಯೇಶನ್(ಎನ್‌ಆರ್‌ಎಐ) ಹೇಳಿಕೆಯಲ್ಲಿ ತಿಳಿಸಿದೆ.