ಸರಬ್‌ಜೋತ್, ಇಶಾ ಸಿಂಗ್ ಗೆ ಚಿನ್ನ
ಹೊಸದಿಲ್ಲಿ, ಮಾ.30: ಸರಬ್‌ಜೋತ್ ಸಿಂಗ್ ಹಾಗೂ ಇಶಾ ಸಿಂಗ್ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಗುರಿ ಇಟ್ಟಿದ್ದಾರೆ. ಈ ಮೂಲಕ ಚೈನೀಸ್ ತೈಪೆಯಲ್ಲಿ ನಡೆಯುತ್ತಿರುವ 12ನೇ ಆವೃತ್ತಿಯ ಏಶ್ಯನ್ ಏರ್‌ಗನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಒಟ್ಟು ಚಿನ್ನದ ಪದಕದ ಸಂಖ್ಯೆ 8ಕ್ಕೇರಿದೆ.
ಸರಬ್‌ಜೋತ್ ಅವರು ಅರ್ಜುನ್ ಚೀಮಾ ಹಾಗೂ ವಿಜಯವೀರ್ ಸಿಂಗ್ ಜೊತೆಗೂಡಿ ಜೂನಿಯರ್ ಟೀಮ್ ವಿಭಾಗದಲ್ಲಿ ಚಿನ್ನ ಜಯಿಸಿದೆೆ. ಇನ್ನು ಎರಡು ದಿನಗಳು ಬಾಕಿಯಿರುವ ಟೂರ್ನಮೆಂಟ್‌ನಲ್ಲಿ ಭಾರತ ಈ ತನಕ 8 ಚಿನ್ನ, 4 ಬೆಳ್ಳಿ ಹಾಗೂ 2 ಕಂಚಿನ ಪದಕ ಜಯಿಸಿದ್ದಾರೆ. ಸರಬ್‌ಜೋತ್ ಅರ್ಹತಾ ಸುತ್ತಿನಲ್ಲಿ 579 ಅಂಕ ಗಳಿಸಿ ಅಗ್ರ ಸ್ಥಾನ ಪಡೆದರು. ಫೈನಲ್ ಸುತ್ತಿನಲ್ಲಿ ಒಟ್ಟು 237.8 ಅಂಕ ಗಳಿಸಿ ಪ್ರತಿಸ್ಪರ್ಧಿ ಕೊರಿಯಾದ ಕಿಮ್ ವೂಜಾಂಗ್(236.6) ಅವರನ್ನು ಸೋಲಿಸಿ ಮೊದಲ ಸ್ಥಾನ ಪಡೆದರು.
ವಿಜಯವೀರ್ 217.5 ಅಂಕ ಗಳಿಸಿ ಕಂಚಿನ ಪದಕ ಜಯಿಸಿದರು. ಅರ್ಜುನ್ ಚೀಮಾ ನಾಲ್ಕನೇ ಸ್ಥಾನ ಪಡೆದರು. ಜೂನಿಯರ್ ಮಹಿಳಾ ಸ್ಪರ್ಧೆಯಲ್ಲಿ ಇಶಾ ಅರ್ಹತಾ ಸುತ್ತಿನಲ್ಲಿ 576 ಅಂಕ ಗಳಿಸಿ ಅಗ್ರ ಸ್ಥಾನ ಪಡೆದರು. ಫೈನಲ್‌ನಲ್ಲಿ 240.1 ಅಂಕ ಗಳಿಸಿ ಮೊದಲ ಸ್ಥಾನ ಪಡೆದರು. ಕೊರಿಯಾದ ಯುನ್ ಸಿಯೊನ್‌ಜಿಯೊಂಗ್(235)ಬೆಳ್ಳಿ ಪದಕ ಗೆದ್ದುಕೊಂಡರು. ಫೈನಲ್‌ಗೆ ಅರ್ಹತೆ ಪಡೆದಿರುವ ಭಾರತದ ಇನ್ನಿಬ್ಬರು ಶೂಟರ್‌ಗಳಾದ ಹರ್ಷದಾ ನಿಥಾವೆ ಹಾಗೂ ದೇವಾಂಶಿ ಧಾಮಾ ಕ್ರಮವಾಗಿ 5 ಹಾಗೂ 8ನೇ ಸ್ಥಾನ ಪಡೆದರು. ಈ ಮೂವರು ಟೀಮ್ ವಿಭಾಗದಲ್ಲಿ ಬೆಳ್ಳಿ ಜಯಿಸಿದರು.