ಐಪಿಎಲ್ : ಸನ್ ರೈಸರ್ಸ್ ಗೆ 118 ರನ್ ಗಳ ಭರ್ಜರಿ ಜಯ
ಹೈದರಾಬಾದ್, ಮಾ.31: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ ಇಂದು ನಡೆದ ಐಪಿಎಲ್ ಟ್ವೆಂಟಿ-20 ಟೂರ್ನಿಯ 11ನೇ ಪಂದ್ಯದಲ್ಲಿ 118 ರನ್ ಗಳ ಭರ್ಜರಿ ಜಯ ಗಳಿಸಿದೆ.
ಹೈದರಾಬಾದ್ ನ ರಾಜೀವ್ ಗಾಂಧಿ ಅಂತರ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗೆಲುವಿಗೆ 232 ರನ್ ಗಳ ಸವಾಲನ್ನು ಪಡೆದ ಆರ್ ಸಿಬಿ ತಂಡ ನಿಗದಿತ 19.5 ಓವರ್ ಗಳಲ್ಲಿ 113 ರನ್ ಗಳಿಸುವಷ್ಟರಲ್ಲಿ ಆಲೌಟಾಗಿದೆ. ಇದರೊಂದಿಗೆ ಆರ್ ಸಿಬಿ ಸತತ ಮೂರನೇ ಸೋಲು ಅನುಭವಿಸಿದೆ.
ಆರ್ ಬಿ ತಂಡದ ಕಾಲಿನ್ ಗ್ರಾಂಡ್ ಹೊಮ್ಮೆ (37) ಗರಿಷ್ಠ ಸ್ಕೋರ್ ದಾಖಲಿಸಿದರು. ಪಾರ್ಥಿವ್ ಪಟೇಲ್ (11), ಪ್ರಯಾಸ್ ಬರ್ಮನ್ (19) ಮತ್ತು ಉಮೇಶ್ ಯಾದವ್ (14) ಎರಡಂಕೆಯ ಸ್ಕೋರ್ ದಾಖಲಿಸಿದರು.
ಹೈದರಾಬಾದ್ ತಂಡದ ಮುಹಮ್ಮದ್ ನಬಿ 11ಕ್ಕೆ 4 ಮತ್ತು ಸಂದೀಪ್ ಶರ್ಮ 19ಕ್ಕೆ 3 ವಿಕೆಟ್ ಪಡೆದರು.
231 /2: ಆರಂಭಿಕ ದಾಂಡಿಗರಾದ ಜೋನಿ ಬೈರ್ ಸ್ಟೋವ್ ಮತ್ತು ಡೇವಿಡ್ ವಾರ್ನರ್ ದಾಖಲಿಸಿದ ಆಕರ್ಷಕ ಶತಕಗಳ ನೆರವಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 231 ರನ್ ಗಳಿಸಿತ್ತು.
ಬೈರ್ ಸ್ಟೋವ್ 114 ರನ್ (56ಎ, 12ಬೌ,7ಸಿ) ಗಳಿಸಿ ಔಟಾದರು. ವಾರ್ನರ್ 100 ರನ್ (55ಎ, 5ಬೌ,5ಸಿ) ಗಳಿಸಿ ಔಟಾಗದೆ ಉಳಿದರು. ಇವರು ಮೊದಲ ವಿಕೆಟ್ ಗೆ 16.2 ಓವರ್ ಗಳಲ್ಲಿ 185 ರನ್ ಗಳಿಸಿದರು. ಆರಂಭಿಕ ದಾಂಡಿಗರು ಶತಕ ದಾಖಲಿಸಿರುವುದು ಐಪಿಎಲ್ ನಲ್ಲಿ ಹೊಸ ದಾಖಲೆಯಾಗಿದೆ.