ಸಿಂಗಲ್ಸ್ ಪ್ರಶಸ್ತಿ ಅಕ್ಸೆಲ್‌ಸೆನ್ ಪಾಲು
ದಿಲ್ಲಿ, ಮಾ.31: ಇಂಡಿಯಾ ಓಪನ್ ಪುರುಷರ ಸಿಂಗಲ್ಸ್ ಟ್ರೋಫಿಗಾಗಿ ನಡೆದ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಈ ವರ್ಷದಲ್ಲಿ ಮೊದಲ ಬಾರಿ ಟೂರ್ನಿಯೊಂದರ ಫೈನಲ್ ತಲುಪಿದ್ದ ಭಾರತದ ಸ್ಟಾರ್ ಆಟಗಾರ ಕಿಡಂಬಿ ಶ್ರೀಕಾಂತ್ ಸೋಲನ್ನಪ್ಪಿದರು. ಅವರ ಎದುರಾಳಿ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್‌ಸೆನ್ 21-7, 22-20 ನೇರ ಗೇಮ್‌ಗಳಿಂದ ಶ್ರೀಕಾಂತ್‌ರನ್ನು ಸದೆಬಡಿದು ಪ್ರಶಸ್ತಿಗೆ ಮುತ್ತಿಕ್ಕಿದರು. ಇಲ್ಲಿನ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ರವಿವಾರ 46 ನಿಮಿಷಗಳ ಅವಧಿಯಲ್ಲಿ ಮುಕ್ತಾಯವಾದ ಅಂತಿಮ ಪಂದ್ಯದಲ್ಲಿ ಡೆನ್ಮಾರ್ಕ್ ಆಟಗಾರ ಅದ್ಭುತ ಪ್ರದರ್ಶನ ನೀಡಿದರು.ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಅಕ್ಸೆಲ್‌ಸೆನ್ ಮೊದಲ ಗೇಮ್‌ನ್ನು 11 ನಿಮಿಷಗಳ ಅವಧಿಯಲ್ಲಿ 21-7ರ ಭಾರೀ ಅಂತರದಲ್ಲಿ ವಶಪಡಿಸಿಕೊಂಡು ಬೀಗಿದರು. ಆ ಬಳಿಕ ವಿಶ್ವದ ನಂ.6 ಆಟಗಾರ ಭಾರತದ ಶ್ರೀಕಾಂತ್ ಎರಡನೇ ಗೇಮ್‌ನಲ್ಲಿ ಭಾರೀ ಪ್ರಯತ್ನ ನಡೆಸಿ, ಗೇಮನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸಿದರು. ಒಂದು ಹಂತದಲ್ಲಿ 14-13ರ ಮುನ್ನಡೆಯನ್ನೂ ಪಡೆದಿದ್ದರು. ಕೊನೆಗೆ 20-18ರವರೆಗೆ ಮುನ್ನಡೆಯನ್ನು ಶ್ರೀಕಾಂತ್ ಕಾಯ್ದಕೊಂಡಿದ್ದರು. ಈ ಹಂತದಲ್ಲಿ ಎದುರಾಳಿಗೆ ಎರಡು ಗೇಮ್ ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟು ಪಂದ್ಯವನ್ನು ಶ್ರೀಕಾಂತ್ ಕೈಚೆಲ್ಲಿದರು.
ಶ್ರೀಕಾಂತ್ ಸೋಲಿನೊಂದಿಗೆ ಟೂರ್ನಿಯಲ್ಲಿ ಭಾರತದ ಅಭಿಯಾನವೂ ಅಂತ್ಯಗೊಂಡಿತು.
ಈ ವರ್ಷ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಅಕ್ಸೆಲ್‌ಸೆನ್, 2017ರಲ್ಲಿ ಇಂಡಿಯಾ ಓಪನ್‌ಗೆ ಮುತ್ತಿಕ್ಕಿದ್ದರು. ಶ್ರೀಕಾಂತ್ ಈ ಪ್ರಶಸ್ತಿಯನ್ನು 2015ರಲ್ಲಿ ಗೆದ್ದುಕೊಂಡಿದ್ದರು.