ಮಯಾಮಿ ಓಪನ್ ಟೆನಿಸ್: ಬಾರ್ಟಿಗೆ ಒಲಿದ ಸಿಂಗಲ್ಸ್ ಕಿರೀಟ
ಮಯಾಮಿ, ಮಾ.31: ಆಸ್ಟ್ರೇಲಿಯದ ಯುವ ಆಟಗಾರ್ತಿ ಆ್ಯಶ್ಲೆ ಬಾರ್ಟಿ ಮಯಾಮಿ ಓಪನ್ ಟೆನಿಸ್‌ನ ಮಹಿಳಾ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಶನಿವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಅವರು ಝೆಕ್ ಗಣರಾಜ್ಯದ 5ನೇ ಶ್ರೇಯಾಂಕದ ಆಟಗಾರ್ತಿ ಕರೋಲಿನಾ ಪ್ಲಿಸ್ಕೊವಾರನ್ನು 7-6 (7/1) 6-3 ಸೆಟ್‌ಗಳಿಂದ ಮಣಿಸಿದರು. ಇದು ಬಾರ್ಟಿಯ ವೃತ್ತಿಜೀವನದ ಅತಿದೊಡ್ಡ ಪ್ರಶಸ್ತಿಯಾಗಿದೆ.
22 ವರ್ಷದ ಬಾರ್ಟಿ 5 ವರ್ಷಗಳ ಹಿಂದೆ ಅತಿಯಾದ ಪ್ರವಾಸದ ಕಾರಣ ಮಾನಸಿಕ ಹಿಂಸೆಗೊಳಗಾಗಿ ಟೆನಿಸ್ ತೊರೆದು ಕ್ರಿಕೆಟ್‌ನತ್ತ ಆಕರ್ಷಿತರಾಗಿದ್ದರು. ಆ ಬಳಿಕ ಟೆನಿಸ್‌ನಲ್ಲಿ ಸ್ಪರ್ಧಿಸಲು ತನ್ನಲ್ಲಿ ಕೌಶಲ್ಯವಿದೆ ಎಂಬುದನ್ನು ಅರಿತುಕೊಂಡು ಫೆ. 2016ರಂದು ಟೆನಿಸ್‌ಗೆ ಮರಳಿದ್ದರು. ಕಳೆದ ಸಪ್ಟ್ಟಂಬರ್‌ನಲ್ಲಿ ಯುಎಸ್ ಓಪನ್ ಮಹಿಳಾ ಡಬಲ್ಸ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಅವರು ಸದ್ಯ ಮತ್ತೊಂದು ಪ್ರಮುಖ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.
ತನ್ನ 15ನೇ ವಯಸ್ಸಿನಲ್ಲಿ ಜೂನಿಯರ್ ವಿಂಬಲ್ಡನ್ ಪ್ರಶಸ್ತಿ ಗೆದ್ದುಕೊಂಡಿದ್ದ ಬಾರ್ಟಿ, ವಿಶ್ವ ರ್ಯಾಂಕಿಂಗ್‌ನಲ್ಲಿ 11ನೇ ಸ್ಥಾನದಿಂದ 9ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಆ ಮೂಲಕ ಸ್ಯಾಮ್ ಸ್ಟೋಸುರ್ ಬಳಿಕ ಅಗ್ರ 10ರ ರ್ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದ ಆಸ್ಟ್ರೇಲಿಯದ ಪ್ರಥಮ ಮಹಿಳಾ ಆಟಗಾರ್ತಿ ಎನಿಸಿಕೊಂಡಿದ್ದಾರೆ.