ಭಾರತೀಯರಿಂದ ಚಿನ್ನದ ಪದಕದ ಕ್ಲೀನ್‌ಸ್ವೀಪ್ ಸಾಧನೆ
ಹೊಸದಿಲ್ಲಿ, ಮಾ.31: ಭಾರತದ ಶೂಟರ್‌ಗಳು ತೈಪೆಯ ತಾವೊಯುನ್‌ನಲ್ಲಿ ನಡೆಯುತ್ತಿರುವ 12ನೇ ಏಶ್ಯನ್ ಏರ್‌ಗನ್ ಚಾಂಪಿಯನ್‌ಶಿಪ್‌ನ 10 ಮೀ. ಏರ್ ರೈಫಲ್ ವಿಭಾಗದಲ್ಲಿ ಸ್ವರ್ಣಪದಕಗಳ ಕ್ಲೀನ್‌ಸ್ವೀಪ್ ಸಾಧನೆ ಮಾಡಿದ್ದಾರೆ. 14 ಬಂಗಾರದ ಪದಕಗಳ ಪೈಕಿ ಭಾರತ ಇಲ್ಲಿಯವರೆಗೆ 12 ಪದಕಗಳನ್ನು ಗೆದ್ದುಕೊಂಡಿದ್ದು, ಒಟ್ಟಾರೆ 12 ಚಿನ್ನ, ನಾಲ್ಕು ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ಭಾರತೀಯರು ತಮ್ಮದಾಗಿಸಿಕೊಂಡಿದ್ದಾರೆ.
ಸ್ಪರ್ಧೆಯ ಐದನೇ ದಿನ ದಿವ್ಯಾಂಶ್ ಸಿಂಗ್ ಪನ್ವಾರ್ ಹಾಗೂ ಇಲವೆನಿಲ್ ವೆಲಾರಿವನ್ 10 ಮೀ. ಏರ್ ರೈಫಲ್‌ನ ಪುರುಷ ಹಾಗೂ ಮಹಿಳಾ ವೈಯಕ್ತಿಕ ಚಿನ್ನದ ಪದಕಗಳನ್ನು ಗೆದ್ದುಕೊಂಡರು. ಅವರಿಬ್ಬರೂ ಜೊತೆಯಾಗಿ ತಮ್ಮ ತಂಡದೊಂದಿಗೆ ಟೀಮ್‌ವಿಭಾಗದಲ್ಲಿಯೂ ಬಂಗಾರದ ಪದಕಕ್ಕೆ ಕೊರಳೊಡ್ಡುವುದರ ಮೂಲಕ ಕ್ಲೀನ್‌ಸ್ವೀಪ್ ಸಾಧನೆ ಮಾಡಿದರು.
ದಿವ್ಯಾಂಶ್ 249.7 ಅಂಕಗಳಿಗೆ ಗುರಿಯಿಟ್ಟರೆ ಕಿಮ್ 247.4 ಅಂಕಗಳಿಸಿ ಬೆಳ್ಳಿಪದಕ ಜಯಿಸಿದರು. ಕಂಚು ಶಿನ್ (225.5 ಅಂಕ) ಪಾಲಾಯಿತು. ಅರ್ಹತಾ ಸುತ್ತಿನಲ್ಲಿ ದಿವ್ಯಾಂಶ್ 628.2 ಅಂಕ ಗಳಿಸಿ 8 ಜನರಿದ್ದ ಫೈನಲ್‌ಗೆ ತಲುಪಿದ್ದರು. ಇದರಲ್ಲಿ ಭಾರತದ ರವಿಕುಮಾರ್ ಹಾಗೂ ದೀಪಕ್ ಕುಮಾರ್ ಇದ್ದರು.
ಭಾರತದ ಈ ತ್ರಿವಳಿ ಜೋಡಿಯು ತಂಡ ವಿಭಾಗದಲ್ಲಿ 1880.7 ಅಂಕ ಗಳಿಸಿ ಚಿನ್ನ ಗೆದ್ದುಕೊಂಡರೆ, ಕೊರಿಯಾದ ತಂಡ 1862.3 ಅಂಕಗಳಿಂದ ಬೆಳ್ಳಿಗೆ ತೃಪ್ತಿಪಟ್ಟಿತು.
ಮಹಿಳಾ ವಿಭಾಗದ ಫೈನಲ್‌ನಲ್ಲಿ ಭಾರತದ ಇಲವೆನಿಲ್ 250.5 ಅಂಕ ಗಳಿಸಿ ಸ್ವರ್ಣ ಪದಕ ಗೆದ್ದರು. ಮಹಿಳಾ ತಂಡ ವಿಭಾಗದಲ್ಲಿ ಇಲವೆನಿಲ್, ಅಪೂರ್ವಿ ಹಾಗೂ ಮೇಘನಾ 1878.6 ಅಂಕಗಳಿಂದ ಬಂಗಾರದ ಪದಕ ಗೆದ್ದುಕೊಂಡರು. ಈ ಟೂರ್ನಿಯು ಸೋಮವಾರ ಕಿರಿಯರ 10 ಮೀ.ಏರ್ ರೈಫಲ್ ಸ್ಪರ್ಧೆಯೊಂದಿಗೆ ಕೊನೆಗೊಳ್ಳಲಿದೆ.