ಮಾಧ್ಯಮ ವರದಿ ಅಲ್ಲಗಳೆದ ಬೌಲರ್‌ಗಳು
ಕ್ಯಾನ್‌ಬೆರಾ, ಮಾ.31: ಡೇವಿಡ್ ವಾರ್ನರ್‌ರನ್ನು ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಿದರೆ ತಾವು ಪಂದ್ಯ ಬಹಿಷ್ಕಾರಕ್ಕೆ ಸಿದ್ಧವಾಗಿದ್ದೆವು ಎಂಬ ಮಾಧ್ಯಮಗಳ ವರದಿಯನ್ನು ಆಸ್ಟ್ರೇಲಿಯದ ನಾಲ್ವರು ಪ್ರಮುಖ ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಝಲ್‌ವುಡ್ ಹಾಗೂ ನಥಾನ್ ಲಿಯೊನ್ ಅಲ್ಲಗಳೆದಿದ್ದಾರೆ.
ಕೇಪ್‌ಟೌನ್‌ನ ಮೂರನೇ ಟೆಸ್ಟ್‌ನಲ್ಲಿ ನಡೆದ ಚೆಂಡು ವಿರೂಪ ಪ್ರಕರಣದ ಸಂಬಂಧ ಆಸೀಸ್ ತಂಡದ ಉಪನಾಯಕರಾಗಿದ್ದ ವಾರ್ನರ್‌ರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿತ್ತು. ಆ ಬಳಿಕ ಅವರನ್ನು ಹಾಗೂ ನಾಯಕ ಸ್ಟೀವ್ ಸ್ಮಿತ್‌ರನ್ನು 12 ತಿಂಗಳುಗಳ ಕಾಲ ಅಮಾನತು ಶಿಕ್ಷೆಗೆ ಗುರಿಪಡಿಸಲಾಗಿತ್ತು.
ತಂಡದ ಸಹ ಆಟಗಾರ ಕ್ಯಾಮರೂನ್ ಬ್ಯಾಂಕ್ರಾಫ್ಟ್ ರಿಗೆ ಚೆಂಡು ವಿರೂಪಗೊಳಿಸಲು ಪ್ರೇರೇಪಿಸಿದ್ದಾರೆ ಎನ್ನಲಾದ ವಾರ್ನರ್‌ರನ್ನು ನಾಲ್ಕನೇ ಟೆಸ್ಟ್‌ಗೆ ಆಯ್ಕೆ ಮಾಡಿದರೆ ಬಹಿಷ್ಕರಿಸಲು ಬೌಲರ್‌ಗಳು ಸಿದ್ಧವಾಗಿದ್ದರೆಂದು ಸ್ಥಳೀಯ ಪತ್ರಿಕೆಗಳು ಗುರುವಾರ ವರದಿ ಮಾಡಿದ್ದವು.
‘‘ಬಹಿಷ್ಕಾರದ ಕುರಿತು ಪ್ರಕಟವಾಗಿರುವ ವರದಿಗಳ ಬಗ್ಗೆ ನಾವು ತುಂಬಾ ಹತಾಶರಾಗಿದ್ದೇವೆ. ಹಲವು ವಿಧದಲ್ಲಿ ಇದು ನಮ್ಮನ್ನು ಅಸಮಾಧಾನಕ್ಕೆ ತಳ್ಳಿದೆ. ಇದು ಸತ್ಯಕ್ಕೆ ದೂರವಾದ ಸಂಗತಿ’’ ಎಂದು ನಾಲ್ವರು ಬೌಲರ್‌ಗಳು ಹೇಳಿದ್ದಾಗಿ ಕ್ರಿಕೆಟ್ ಆಸ್ಟ್ರೇಲಿಯದ ಹೇಳಿಕೆ ತಿಳಿಸಿದೆ.
‘‘ಒಂದು ತಂಡವಾಗಿ ನಾವು ಮುನ್ನಡೆಯಲು ಗಮನಹರಿಸುತ್ತೇವೆ. ಮುಂಬರುವ ವಿಶ್ವಕಪ್‌ಗೆ ಆಸ್ಟ್ರೇಲಿಯ ತಂಡವನ್ನು ಸಿದ್ಧಗೊಳಿಸಲು ಕೈಜೋಡಿಸುತ್ತೇವೆ’’ ಎಂದು ಬೌಲರ್‌ಗಳು ಸ್ಪಷ್ಟಪಡಿಸಿದ್ದಾರೆ.