ಖಶೋಗಿ ಚಿತ್ರಗಳನ್ನು ಜಾಲತಾಣದಲ್ಲಿ ಹಾಕಿದ ಪಾಕ್ ಪತ್ರಕರ್ತರ ವಿರುದ್ಧ ತನಿಖೆ

Update: 2019-04-02 17:51 GMT

ಇಸ್ಲಾಮಾಬಾದ್, ಎ. 2: ಸೌದಿ ಅರೇಬಿಯದ ಹತ್ಯೆಗೀಡಾಗಿರುವ ಪತ್ರಕರ್ತ ಜಮಾಲ್ ಖಶೋಗಿಯ ಚಿತ್ರಗಳನ್ನು ಇಂಟರ್‌ನೆಟ್‌ನಲ್ಲಿ ಹಂಚಿಕೊಂಡಿರುವ ಆರು ಪತ್ರಕರ್ತರ ವಿರುದ್ಧ ತನಿಖೆಗೆ ಪಾಕಿಸ್ತಾನದ ಆಂತರಿಕ ಸಚಿವಾಲಯ ಆದೇಶ ನೀಡಿದೆ ಎಂದು ಜಾಗತಿಕ ಮಾಧ್ಯಮ ನಿಗಾ ಸಂಸ್ಥೆ ‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್’ ಸೋಮವಾರ ಹೇಳಿದೆ.

ಪತ್ರಕರ್ತರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ ಎಂಬುದನ್ನು ಕೇಳಿ ಆಘಾತವಾಗಿದೆ ಎಂದು ಅದು ಹೇಳಿದೆ. ‘‘ಭಿನ್ನಮತೀಯ ಪತ್ರಕರ್ತರ ವಿರುದ್ಧ ಪಾಕಿಸ್ತಾನಿ ಪೊಲೀಸರ ಹಿಂದಿನ ವರ್ತನೆಯ ಹಿನ್ನೆಲೆಯಲ್ಲಿ, ಬೆದರಿಕೆಯ ಈ ಹೊಸ ತಂತ್ರವನ್ನು ಖಂಡಿಸುತ್ತೇವೆ’’ ಎಂದಿದೆ.

ಆಂತರಿಕ ಸಚಿವಾಲಯದ ಭಾಗವಾಗಿರುವ ಫೆಡರಲ್ ಇನ್ವೆಸ್ಟಿಗೇಶನ್ ಏಜನ್ಸಿಯ ಸೈಬರ್‌ಕ್ರೈಮ್ ಘಟಕದ ಮಾರ್ಚ್ 13ರ ಪತ್ರದಲ್ಲಿ, ಈ ಪತ್ರಕರ್ತರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿಕೆಯೊಂದರಲ್ಲಿ ‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್’ ಹೇಳಿದೆ.

ಸೌದಿ ಯುವರಾಜ ಮುಹಮ್ಮದ್ ಬಿನ್ ಸುಲ್ತಾನ್ ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಗ ಅವರನ್ನು ಗುರಿಯಾಗಿಸಿ ಸಾಮಾಜಿಕ ಮಾಧ್ಯಮ ಅಭಿಯಾನ ನಡೆಸಲಾಗಿತ್ತು ಎಂಬುದಾಗಿ ಫೆಡರಲ್ ಇನ್ವೆಸ್ಟಿಗೇಶನ್ ಏಜನ್ಸಿ ತನ್ನ ಪತ್ರದಲ್ಲಿ ಹೇಳಿದೆ ಹಾಗೂ ಈ ಪತ್ರಕರ್ತರ ಹೆಸರುಗಳನ್ನು ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News