‘ಬ್ರೆಕ್ಸಿಟ್’ಗಾಗಿ ರಾಜಿ ಮಾತುಕತೆಗೆ ಬ್ರಿಟನ್ ಪ್ರಧಾನಿ ಮುಂದು
ಲಂಡನ್, ಎ. 3: ಹಲವು ಪ್ರಯತ್ನಗಳ ಹೊರತಾಗಿಯೂ ‘ಬ್ರೆಕ್ಸಿಟ್’ ಮಸೂದೆಯನ್ನು ಸಂಸತ್ತು ಅಂಗೀಕರಿಸುವಂತೆ ಮಾಡುವಲ್ಲಿ ವಿಫಲಗೊಂಡಿರುವ ಬ್ರಿಟನ್ ಪ್ರಧಾನಿ ತೆರೇಸಾ ಮೇ, ಇನ್ನೊಂದು ಅವಕಾಶ ಕೋರುವುದಕ್ಕಾಗಿ ತನ್ನ ನಿಲುವನ್ನು ಸಡಿಲಿಸುವ ಇಂಗಿತವನ್ನು ಮಂಗಳವಾರ ವ್ಯಕ್ತಪಡಿಸಿದ್ದಾರೆ. ಅದೇ ವೇಳೆ, ಪ್ರತಿಪಕ್ಷ ಲೇಬರ್ ನಾಯಕ ಜೆರೆಮಿ ಕಾರ್ಬಿನ್ ಜೊತೆ ಮಾತುಕತೆ ನಡೆಸುವುದಾಗಿಯೂ ಹೇಳಿದ್ದಾರೆ.
ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ (ಬ್ರೆಕ್ಸಿಟ್) ಮಸೂದೆಯನ್ನು ಸಂಸತ್ತು ಅಂಗೀಕರಿಸುವಂತೆ ಮಾಡಲು ಪ್ರತಿಪಕ್ಷದ ನೆರವನ್ನು ಕೋರಲು ತೆರೇಸಾ ಮುಂದಾಗಿರುವುದು, ತನ್ನ ಪಕ್ಷದ ಬಂಡುಕೋರರು ಮತ್ತು ತನ್ನ ಅಲ್ಪಮತ ಸರಕಾರಕ್ಕೆ ಬೆಂಬಲ ನೀಡಿರುವ ಡೆಮಾಕ್ರಟಿಕ್ ಯೂನಿಯನಿಸ್ಟ್ ಪಕ್ಷದ ಸಂಸದರ ಮೇಲೆ ಅವರು ನಂಬಿಕೆ ಕಳೆದುಕೊಂಡಿದ್ದಾರೆ ಎನ್ನುವುದನ್ನು ಸೂಚಿಸಿದೆ.
ಮಂಗಳವಾರ ಏಳು ಗಂಟೆಗಳ ಕಾಲ ನಡೆದ ಸಚಿವ ಸಂಪುಟ ಸಭೆಯ ಬಳಿಕ, ಡೌನಿಂಗ್ ಸ್ಟ್ರೀಟ್‌ನಲ್ಲಿ ಅವರು ಈ ಹೇಳಿಕೆಯನ್ನು ನೀಡಿದರು.
‘‘ಬಿಕ್ಕಟ್ಟನ್ನು ಮುರಿಯಲು ನಾನಿಂದು ಕ್ರಮ ತೆಗೆದುಕೊಳ್ಳುತ್ತಿದ್ದೇನೆ: ಪ್ರತಿಪಕ್ಷ ನಾಯಕರೊಂದಿಗೆ ಮಾತುಕತೆ ನಡೆಸಲು ನಾನು ಮುಂದಾಗಿದ್ದೇನೆ ಹಾಗೂ ಒಪ್ಪಂದವೊಂದರ ಮೂಲಕ ಐರೋಪ್ಯ ಒಕ್ಕೂಟದಿಂದ ಹೊರಬರುವುದನ್ನು ಖಾತರಿಪಡಿಸುವ ಪ್ರಸ್ತಾಪವೊಂದಕ್ಕೆ ನಾನು ಒಪ್ಪುತ್ತೇನೆ’’ ಎಂದು ಅವರು ಹೇಳಿದರು.
ಬ್ರೆಕ್ಸಿಟ್ ಒಪ್ಪಂದ ಕುರಿತ ತನ್ನ ನಿಲುವನ್ನು ಲೇಬರ್ ಪಕ್ಷ ಈಗಾಗಲೇ ಸ್ಪಷ್ಟಪಡಿಸಿದೆ. ‘‘ನಾವು ಒಂದು ಶರತ್ತಿನ ಮೇಲೆ ಬ್ರೆಕ್ಸಿಟ್ ಒಪ್ಪಂದವನ್ನು ಅಂಗೀಕರಿಸುತ್ತೇವೆ. ಅಂದರೆ, ಈ ಒಪ್ಪಂದವನ್ನು ಮತ್ತೆ ಜನಮತಗಣನೆಗೆ ಒಳಪಡಿಸಬೇಕು. ಈ ಒಪ್ಪಂದ ಸ್ವೀಕೃತವೇ, ತಿರಸ್ಕೃತವೇ ಎನ್ನುವುದನ್ನು ಜನರು ನಿರ್ಧರಿಸಬೇಕು’’ ಎಂಬುದಾಗಿ ಅದು ಹೇಳಿದೆ.