ಭೀಕರ ಚಂಡಮಾರುತಕ್ಕೆ ಊರೇ ಜಲಾವೃತ: ಮಾವಿನಮರದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

Update: 2019-04-06 16:06 GMT

ದೊಂಬ್, ಮನಿಕಾ, ಎ.6: "ಎರಡು ವರ್ಷದ ಮಗನೊಂದಿಗೆ ಮನೆಯಲ್ಲಿದ್ದಾಗ, ಹಠಾತ್ತನೆ ಮನೆಯೊಳಗೆ ಪ್ರವಾಹದ ನೀರು ಹರಿಯಲಾರಂಭಿಸಿತು. ಮಾವಿನ ಮರದ ತುದಿ ಏರುವುದು ಬಿಟ್ಟರೆ ಬದುಕಿಕೊಳ್ಳಲು ದಾರಿಯೇ ಇರಲಿಲ್ಲ. ಆಗ ಅಸಾಧ್ಯ ಹೆರಿಗೆ ನೋವು ಆರಂಭವಾಯಿತು. ನನ್ನ ನೆರವಿಗೆ ಸುತ್ತಮುತ್ತ ಯಾರೂ ಇರಲಿಲ್ಲ. ಕೆಲ ಗಂಟೆಗಳಲ್ಲಿ ಹೆಣ್ಣುಮಗು ಸಾರಾ ಮಾವಿನಮರದ ತುದಿಯಲ್ಲೇ ಹುಟ್ಟಿದಳು. ಮರದ ತುದಿಯಲ್ಲಿ ಬಹಳ ಹೊತ್ತಿನವರೆಗೆ ಮಗ ಮತ್ತು ಸಾರಾ ಮಾತ್ರ ನನ್ನ ಜತೆಗಿದ್ದದ್ದು. ಸಾರಾ ಹುಟ್ಟಿ ಎರಡು ದಿನ ನಾವು ಮರದ ತುದಿಯಲ್ಲೇ ಇದ್ದೆವು. ಬಳಿಕ ನೆರೆಯವರು ಸಹಾಯ ಮಾಡಿ ಮರದಿಂದ ಕೆಳಗೆ ಇಳಿಸಿದರು. ನಾವು ಕೂಡಾ ಇತರರಂತೆ ಇಲ್ಲಿಗೆ ಬಂದೆವು"……

ಇದು ಮೊಝಾಂಬಿಕ್ ದೇಶದ ಮನಿಕಾ ಪ್ರಾಂತ್ಯದ ದೊಂಬ್ ಪ್ರದೇಶದ ಸುಧಾರಿತ ವಸತಿ ವ್ಯವಸ್ಥೆಯಲ್ಲಿ ಆಸರೆ ಪಡೆದಿರುವ ಅಮೇಲಿಯಾರ ಮಾತುಗಳು.

ಇಡಾಯಿ ಚಂಡಮಾರುತ ಕೇಂದ್ರ ಮೊಝಾಂಬಿಕ್ ಮೇಲೆ ಅಪ್ಪಳಿಸಿದ್ದು, ವ್ಯಾಪಕ ಹಾನಿ ಮಾಡಿದೆ. ಪರಿಹಾರ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದೆ. ದೊಂಬ್‍ ನ ಆಡಳಿತಾತ್ಮಕ ಪ್ರದೇಶ ಕೂಡಾ ಚಂಡಮಾರುತದಿಂದ ಅಪಾರ ಹಾನಿಗೀಡಾದ ಪ್ರದೇಶಗಳಲ್ಲಿ ಒಂದು.

ದೊಂಬ್ ಪ್ರದೇಶದಲ್ಲಿ ಸುಮಾರು 3,000 ಮಂದಿ ಸ್ವಂತ ವ್ಯವಸ್ಥೆಯಲ್ಲಿ ಉಳಿದುಕೊಂಡಿದ್ದಾರೆ. ಇವರ ಪೈಕಿ ಹಸುಳೆ ಸಾರಾ ಕೂಡಾ ಒಬ್ಬಳು. ಅಚ್ಚರಿಯೊಂದಿಗೆ ಈ ಜಗತ್ತಿಗೆ ಕಾಲಿಟ್ಟ ಸಾರಾ ಇದೀಗ ಚೇತರಿಸಿಕೊಳ್ಳುತ್ತಿದ್ದಾಳೆ. ತಾಯಿ ಅಮೇಲಿಯಾ ಸತತವಾಗಿ ಎದೆಹಾಲುಣಿಸಿ ಮಗುವನ್ನು ರಕ್ಷಿಸಿಕೊಂಡಿದ್ದಾರೆ. ಇದೀಗ ಹಾನಿಗೀಡಾದ ಪ್ರದೇಶದ ಇತರ ತಾಯಂದಿರು ಇವರ ನೆರವಿಗೆ ಬಂದಿದ್ದಾರೆ.

ಸಮುದಾಯ ಆರೋಗ್ಯ ಕಾರ್ಯಕರ್ತೆ ಜೊಸಿಯಾಸ್ ಚಾಕಾ ಅವರಿಂದ ಆರೋಗ್ಯ ಮತ್ತು ಪೌಷ್ಟಿಕಾಂಶ ಬೆಂಬಲವನ್ನೂ ಪಡೆಯುತ್ತಿದ್ದಾರೆ. ಜೊಸಿಯಾಸ್ ಕೂಡಾ ತಮ್ಮ ಮನೆ ಹಾಗೂ ಆಸ್ತಿಯನ್ನು ಇಡಾಯಿ ಚಂಡಮಾರುತದಲ್ಲಿ ಕಳೆದುಕೊಂಡಿದ್ದಾರೆ. ಆದರೆ 2015ರಿಂದೀಚೆಗೆ ತರಬೇತಿ ಪಡೆದ ಹಿನ್ನೆಲೆಯಲ್ಲಿ, ಪ್ರಾಥಮಿಕ ಆರೋಗ್ಯ ಮತ್ತು ಪೌಷ್ಟಿಕಾಂಶ ಆರೈಕೆಯನ್ನು ನೆರೆಯವರಿಗೆ ಮಾಡುತ್ತಿದ್ದಾರೆ.

ಮೊಝಾಂಬಿಕ್ ನಲ್ಲಿ ಭೀಕರ ಚಂಡಮಾರುತದಿಂದ ಸುಮಾರು 19 ಲಕ್ಷ ಮಂದಿ ತೊಂದರೆಗೀಡಾಗಿದ್ದಾರೆ. ಈ ಪೈಕಿ 10 ಲಕ್ಷ ಮಕ್ಕಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News