ಭಾರತದ ಜೊತೆ ಮೂರ್ಖ ವ್ಯವಹಾರ: ಅಧಿಕ ತೆರಿಗೆ ವಿಧಿಸುವ ಕುರಿತಂತೆ ಟ್ರಂಪ್ ಹೇಳಿಕೆ

Update: 2019-04-07 16:02 GMT

ವಾಷಿಂಗ್ಟನ್, ಎ.7: ಅಮೆರಿಕದ ಬಹಳಷ್ಟು ಉತ್ಪನ್ನಗಳಿಗೆ ಭಾರತವು ಶೇ.100ಕ್ಕೂ ಅಧಿಕ ತೆರಿಗೆ ವಿಧಿಸುತ್ತಿದೆ. ಆದರೆ ಇದೇ ಉತ್ಪನ್ನಗಳಿಗೆ ಅಮೆರಿಕ ತೆರಿಗೆಯನ್ನೇ ವಿಧಿಸುವುದಿಲ್ಲ ಎಂದು ಹೇಳಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಮೂರ್ಖ ವ್ಯವಹಾರದ ಬಗ್ಗೆ ಗಮನ ಹರಿಸುವಂತೆ ಹಿರಿಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.   

   ಭಾರತ ತೆರಿಗೆ ರಾಜನಾಗಿದೆ ಮತ್ತು ಅಮೆರಿಕದ ಉತ್ಪನ್ನಗಳ ಮೇಲೆ ಅಧಿಕ ತೆರಿಗೆ ವಿಧಿಸುತ್ತಿದೆ ಎಂದು ಟ್ರಂಪ್ ಪದೇ ಪದೇ ಹೇಳುತ್ತಿದ್ದಾರೆ . ಲಾಸ್ ವೇಗಾಸ್‌ನಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ನಮ್ಮಲ್ಲಿ ಒಂದು ವಿಶೇಷವಿದೆ. ಒಂದು ನಿರ್ದಿಷ್ಟ ದೇಶ, ಭಾರತವು ನಮ್ಮ ಮೇಲೆ ತೆರಿಗೆ ವಿಧಿಸುತ್ತಿದೆ. ಹಲವು ವಸ್ತುಗಳಿಗೆ ಶೇ.100ಕ್ಕೂ ಹೆಚ್ಚು ತೆರಿಗೆ ವಿಧಿಸುವ ಎಂತಹ ಮಹಾನ್ ದೇಶ, ಮಹಾನ್ ಮಿತ್ರ ಪ್ರಧಾನಿ ನರೇಂದ್ರ ಮೋದಿ. ಆದರೆ ಇದೇ ವಸ್ತುಗಳಿಗೆ ಅಮೆರಿಕ ತೆರಿಗೆಯನ್ನೇ ವಿಧಿಸುತ್ತಿಲ್ಲ” ಎಂದು ಹೇಳಿದರು.

ಅಮೆರಿಕದ ಉತ್ಪನ್ನಗಳಿಗೆ ಅಧಿಕ ತೆರಿಗೆ ವಿಧಿಸುತ್ತಿರುವ ದೇಶವೆಂದರೆ ಚೀನಾ ಮತ್ತು ಭಾರತ ಎಂದವರು ಹೇಳಿದರು. ಭಾರತವು ಮೂರ್ಖ ಮತ್ತು ಅನ್ಯಾಯದ ವ್ಯಾಪಾರ ವ್ಯವಹಾರ ನಡೆಸುತ್ತಿದೆ ಎಂದ ಅವರು, ಅಮೆರಿಕದೊಂದಿಗಿನ ವ್ಯಾಪಾರ ಅಸಮತೋಲನವನ್ನು ಸರಿಪಡಿಸುವಂತೆ ಪ್ರಧಾನಿ ಮೋದಿಗೆ ಕರೆ ನೀಡಿದರು. ಭಾರತದೊಂದಿಗೆ ಅನುರೂಪ ತೆರಿಗೆ ವ್ಯವಸ್ಥೆಗೆ ಸೆನೆಟ್ ಸದಸ್ಯರಿಂದ ವಿರೋಧ ಬರುತ್ತಿದೆ. ನೀವು ಹಾಗೆ ಮಾಡುವಂತಿಲ್ಲ ಎಂದವರು ಹೇಳುತ್ತಾರೆ. ಇದು ಮುಕ್ತ ವ್ಯಾಪಾರವಲ್ಲ. ಇದು ಎಲ್ಲಿಂದ, ಯಾವಾಗ ಬಂದಿದೆ ಎಂದು ಭಾರತದ ವಿರುದ್ಧ ವಾಗ್ದಾಳಿ ನಡೆಸಿದರು.

   ಇಂತಹ ಒಪ್ಪಂದವನ್ನು ಮಾಡಿಕೊಂಡವರು ಯಾರು. ಇದರಿಂದಾಗಿ ಅಮೆರಿಕಕ್ಕೆ ವಾರ್ಷಿಕ 800 ಬಿಲಿಯನ್ ಡಾಲರ್‌ನಷ್ಟು ನಷ್ಟವಾಗುತ್ತಿದೆ ಮತ್ತು ಹಲವು ವರ್ಷಗಳಿಂದ ಈ ನಷ್ಟವನ್ನು ಅಮೆರಿಕ ಅನುಭವಿಸುತ್ತಿದೆ. ಡೆಮೊಕ್ರಾಟ್‌ಗಳು ಮಾಡಿಕೊಂಡ ಒಪ್ಪಂದದಿಂದಾದ ನಷ್ಟವನ್ನು ರಿಪಬ್ಲಿಕನ್‌ಗಳು ಸರಿದೂಗಿಸಬೇಕಿದೆ.ನಾವು ಇದನ್ನು ಹಿಂದೆ ಪಡೆಯುತ್ತೇವೆ. ಈ ನಷ್ಟದ ಬಹುತೇಕ ಪ್ರಮಾಣವನ್ನು ಹಿಂದಕ್ಕೆ ಪಡೆಯಲಿದ್ದೇವೆ . ಒಂದು ರಾಷ್ಟ್ರದ ಜತೆ ಮೃದು ಧೋರಣೆ ಹೊಂದಿರುವಾಗ 20 ಬಿಲಿಯನ್ ಡಾಲರ್ ನಷ್ಟವಾದರೆ ತೊಂದರೆಯಿಲ್ಲ ಎಂದು ರಾಜಕೀಯವಾಗಿ ನಾನು ಹೇಳಬಹುದು. ಆದರೆ ಹೀಗೆ ಮಾಡಿದರೆ ಎಲ್ಲರೊಂದಿಗೂ ಸ್ನೇಹಪರವಾಗಿಯೇ ಇರಬೇಕಾಗುತ್ತದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News