ಇರಾನ್: ಭೀಕರ ಪ್ರವಾಹಕ್ಕೆ ಕನಿಷ್ಠ 70 ಬಲಿ: 1 ಸಾವಿರಕ್ಕೂ ಅಧಿಕ ಹಳ್ಳಿ, ಪಟ್ಟಣಗಳು ಜಲಾವೃತ

Update: 2019-04-07 17:25 GMT

 ದುಬೈ,ಎ.7: ನೈಋತ್ಯ ಇರಾನ್‌ನಲ್ಲಿ ಕುಂಭದ್ರೋಣ ಮಳೆಯ ಆರ್ಭಟಕ್ಕೆ 70 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ನೂರಾರು ಹಳ್ಳಿಗಳು ಹಾಗೂ ಪಟ್ಟಣಗಳು ಪ್ರವಾಹಪೀಡಿತವಾಗಿವೆ.

   ಸುಮಾರು 50 ಸಾವಿರ ಜನಸಂಖ್ಯೆಯಿರುವ ಈ ನಗರದ ಬಹುತೇಕ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ.  ಪ್ರಮುಖ ನದಿಗಳ ಅಣೆಕಟ್ಟುಗಳು ತುಂಬಿದ್ದು, ಅವುಗಳ ನೀರನ್ನು ಅಧಿಕಾರಿಗಳು ಹೊರಬಿಡುತ್ತಿದ್ದು,ತೈಲ ಸಮೃದ್ಧ ಪ್ರಾಂತವಾದ ಖುಜೆಸ್ತಾನ್‌ನ ಸುಸೆನ್‌ಜಾನ್ ನಗರದ ಸಂಪೂರ್ಣ ಜಲಾವೃತಗೊಂಡಿದೆ.

‘‘ ಸಂತ್ರಸ್ತರನ್ನು ತೆರವುಗೊಳಿಸುವ ಆದೇಶವನ್ನು ಜಾರಿಗೊಳಿಸಲಾಗಿದೆ ಹಾಗೂ ಮಹಿಳೆಯರು ಹಾಗೂ ಮಕ್ಕಳನ್ನು ತಕ್ಷಣವೇ ಸ್ಥಳಾಂತರಿಸುವಂತೆ ಶಿಫಾರಸು ಮಾಡಲಾಗಿದೆ. ಆದರೆ ಪುರುಷರು ಮತ್ತು ಯುವಕರು ಉಳಿದುಕೊಂಡು, ಪರಿಹಾರ ಕಾರ್ಯಾಚರಣೆಗೆ ನೆರವಾಗುವಂತೆ ಮನವಿ ಮಾಡಿದ್ದೇವೆ ’’ಎಂದು ಖುಝೆಸ್ತಾನ್‌ನ ಪ್ರಾಂತೀಯ ಗವರ್ನರ್ ಘೋಲ್‌ಮ್ರೆಝಾ ಶರಿಯತಿ ತಿಳಿಸಿದ್ದಾರೆ.

 ನೆರೆಯ ಲೊರೆಸ್ತಾನ್ ಪ್ರಾಂತದಲ್ಲೂ ಪ್ರವಾಹ ಪರಿಸ್ಥಿತಿ ಬಿಗಡಾಯಿಸಿದ್ದು, ಅಲ್ಲಿನ ಏಳು ಗ್ರಾಮಗಳಲ್ಲಿ ಭೂಕುಸಿತವುಂಟಾಗಿದ್ದು, ಜನರನ್ನು ತೆರವುಗೊಳಿಸುವ ಕಾರ್ಯಾಚರಣೆ ಭರದಿಂದ ಸಾಗಿದೆಯೆಂದು ಸರಕಾರಿ ಟಿವಿ ವಾಹಿನಿ ವರದಿ ಮಾಡಿದೆ.

ನೈಋತ್ಯ ಇರಾನ್‌ನ ವಿವಿಧೆಡೆ ಪ್ರವಾಹದಿಂದಾಗಿ ಕನಿಷ್ಠ 70 ಮಂದಿ ಸಾವನ್ನಪ್ಪಿದ್ದಾರೆಂದು ದೇಶದ ತುರ್ತು ಸೇವೆಗಳ ನಿರ್ವಹಣಾ ತಂಡದ ವರಿಷ್ಠ ಫಿರೋಸ್ಸೆನ್ ಕೊಯುಲಿವಾಂದ್, ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಇರ್ನಾಗೆ ತಿಳಿಸಿದ್ದಾರೆ.

   ಮಾರ್ಚ್ 19ರಿಂದ ಇರಾನ್‌ನಾದ್ಯಂತ ವ್ಯಾಪಕ ಮಳೆಯಾಗುತ್ತಿರುವುದರಿಂದ ವಿವಿಧೆಡೆ ಪ್ರವಾಹ ಪರಿಸ್ಥಿತಿಯುಂಟಾಗಿದೆ. ಸುಮಾರು 1900 ನಗರಗಳು ಹಾಗೂ ಹಳ್ಳಿಗಳು ಜಲಾವೃತಗೊಂಡಿವೆ.ಈವರೆಗೆ ಸುಮಾರು 86 ಸಾವಿರ ಮಂದಿ ಸಂತ್ರಸ್ತರನ್ನು ತುರ್ತು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಮಳೆಯಿಂದ ಹಾನಿಗೀಡಾದ ಕುಟುಂಬಗಳಿಗೆ ಅದರಲ್ಲೂ ವಿಶೇಷವಾಗಿ ರೈತರಿಗೆ ಆಗಿರುವ ಎಲ್ಲಾ ನಷ್ಟಗಳಿಗೂ ಪರಿಹಾರವನ್ನು ನೀಡಲಾಗುವುದು ಎಂದು ಇರಾನ್ ಆಡಳಿತ ಈಗಾಗಲೇ ಘೋಷಿಸಿದೆ.

 ಅಮೆರಿಕವು ಇಂಧನ ಹಾಗೂ ಆರ್ಥಿಕ ವಲಯದ ಮೇಲೆ ಹೇರಿರುವ ಅರ್ಥಿಕ ನಿರ್ಬಂಧಗಳಿಂದಾಗಿ, ಇರಾನ್‌ನ ತೈಲ ರಫ್ತು ಬಹುತೇಕ ಸ್ಥಗಿತಗೊಂಡಿದ್ದು, ಹಾಗೂ ವಿದೇಶದಿಂದಲೂ ಆದಾಯ ದೊರೆಯುವುದಕ್ಕೆ ನಿರ್ಬಂಧವುಂಟಾಗಿದೆ.

ಭಾರೀ ಮಳೆಯಿಂದಾಗಿ, ಹಳ್ಳಿಗಳು ಮುಳುಗಡೆಯಾಗುವುದು ಮುಂದುವರಿಯುತ್ತಿರುವಂತೆಯೇ, ದಕ್ಷಿಣ ಪ್ರಾಂತದಲ್ಲಿ ಸಂಚಾರಿ ವೈದ್ಯಕೀಯ ಘಟಕಗಳನ್ನು ನಿಯೋಜಿಸುವುದಾಗಿ ಇರಾನ್ ಆಡಳಿತ ತಿಳಿಸಿದೆ. ಸುಮಾರು 1 ಸಾವಿರ ಮಂದಿ ಸಂತ್ರಸ್ತರನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆಯಂದು ಅದು ಹಗೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News