ಭರ್ಜರಿ ಬಹುಮತ: ನಶೀದ್‌ಗೆ ಮತ್ತೆ ಮಾಲ್ದೀವ್ಸ್ ಗದ್ದುಗೆ

Update: 2019-04-07 17:39 GMT

ಮಾಲೆ,ಎ.7: ಸ್ವದೇಶಕ್ಕೆ ವಾಪಸಾದ ಐದೇ ತಿಂಗಳುಗಳ ಬಳಿಕ ಮಾಲ್ದೀವ್ಸ್‌ನ ಉಚ್ಛಾಟಿತ ಮಾಜಿ ಅಧ್ಯಕ್ಷ ಮುಹಮ್ಮದ್ ನಶೀದ್, ಮತ್ತೆ ದೇಶದ ಅಧಿಕಾರ ಚುಕ್ಕಾಣಿ ಹಿಡಿಯಲು ಸಿದ್ಧರಾಗಿದ್ದಾರೆ. 87 ಸದಸ್ಯ ಬಲದ ಮಾಲ್ದೀವ್ಸ್ ಸಂಸತ್‌ಗೆ ನಡೆದ ಚುನಾವಣೆಯಲ್ಲಿ ನಶೀದ್ ನೇತೃತ್ವದ ಡೆಮಾಕ್ರಾಟಿಕ್ ಪಾರ್ಟಿಯು, ಮೂರನೆ ಎರಡರಷ್ಟು ಬಹುಮತ ಪಡೆಯುವತ್ತ ದಾಪುಗಾಲಿಡುತ್ತಿದೆ.

ಶನಿವಾರ ಮಾಲ್ದೀವ್ಸ್ ಸಂಸತ್‌ಗೆ ಮತದಾನ ನಡೆದಿದ್ದು, ಇಂದು ಮತ ಏಣಿಕೆ ಆರಂಭಗೊಂಡಿದೆ. ಆರಂಭಿಕ ಸುತ್ತಿನಲ್ಲೇ ನಶೀದ್ ಅವರ ಡೆಮಾಕ್ರಾಟಿಕ್ ಭಾರೀ ಮುನ್ನಡೆಯನ್ನು ಸಾಧಿಸಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

    ನಶೀದ್ ಅವರ ಸರಕಾರದಲ್ಲಿ ಉಪಾಧ್ಯಕ್ಷರಾಗಿದ್ದ ಇಬ್ರಾಹೀಂ ಮುಹಮ್ಮದ್ ಸಾಲೀಹ್, ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅನಿರೀಕ್ಷಿತ ಗೆಲುವನ್ನು ಸಾಧಿಸಿದ ಬಳಿಕ ನಶೀದ್ ಸ್ವದೇಶಕ್ಕೆ ವಾಪಸಾಗಿದ್ದರು. ಈ ಮಧ್ಯೆ ಎಂಡಿಪಿಗೆ ಮುಖ್ಯ ಪ್ರತಿಸ್ಪರ್ಧಿಯಾಗಿದ್ದ ಅಬ್ದುಲಾ ಯಾಮೀನ್ ಅವರ ನಾಯಕತ್ವದ ಮಾಲ್ದೀವ್ಸ್ ಪ್ರಗತಿಪರ ಪಕ್ಷ(ಎಂಡಿಪಿ)ವು ಈ ಚುನಾವಣೆಯಲ್ಲಿ ಅತ್ಯಂತ ಕಳಪೆ ನಿರ್ವಹಣೆ ತೋರಿದ್ದು, ಕೇವಲ ನಾಲ್ಕು ಸೀಟುಗಳನ್ನು ಗೆಲ್ಲುವಲ್ಲಿ ಸಫಲವಾಗಿದೆ.

  ನಶೀದ್ ಅವರ ಪ್ರಬಲ ಎದುರಾಳಿ ಹಾಗೂ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಅವರು ಕಪ್ಪು ಹಣ ಬಿಳುಪು ಹಾಗೂ ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

  ಅಬ್ದುಲ್ಲಾ ಯಾಮೀನ್ ಅಧ್ಯಕ್ಷರಾಗಿದ್ದ ವೇಳೆ, ಅವರು ನಶೀದ್‌ರನ್ನು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದನ್ನು ನಿಷೇಧಿಸಿದ್ದರು.

 ಆರಂಭಿಕ ಹಂತದ ಚುನಾವಣಾ ಫಲಿತಾಂಶದ ಪ್ರಕಾರ, ಎಂಡಿಪಿ 87 ಸ್ಥಾನಗಳ ಪೈಕಿ 50ರಲ್ಲಿ ಜಯಗಳಿಸಿದೆ.ಆದರೆ ಎಂಡಿಪಿಯು ಸುಮಾರು 68 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆಯೆಂದು ಖಾಸಗಿ ಮಾಧ್ಯಮ ವರದಿಗಳು ತಿಳಿಸಿವೆ.

ಚುನಾವಣೆಯಲ್ಲಿ ತನ್ನ ಪಕ್ಷವು ಮುನ್ನಡೆ ಸಾಧಿಸುತ್ತಿದ್ದಂತೆಯೇ, ನಶೀದ್ ಅವರು ಬೆಂಬಲಿಗರನ್ನುದ್ದೇಶಿಸಿ ಮಾತನಾಡುತ್ತಾ, '' ಮಾಲ್ದೀವ್ಸ್ ಹೊಂಬಣ್ಣದ ಹೊಸ ಸೂರ್ಯೋದಯವನ್ನು ಸ್ವಾಗತಿಸಲಿದೆ'' ಎಂದು ಹೇಳಿದರು.

 ಮಾಲ್ದೀವ್ಸ್ ಸಂಸತ್‌ಗೆ ಶನಿವಾರ ಚುನಾವಣೆಯಲ್ಲಿ ಸುಮಾರು ಶೇ.80ರಷ್ಟು ಮತದಾನವಾಗಿದೆಯೆಂದು ಚುನಾವಣಾಧಿಕಾರಿಗಳು ಅಂದಾಜಿಸಿದ್ದಾರೆ.

  ತನ್ನ ಪಕ್ಷದ ಭರ್ಜರಿ ಗೆಲುವಿನ ಬಳಿಕ, ನಶೀದ್ ಅವರು ಶಾಸನಸಭೆಯ ನಾಯಕತ್ವವನ್ನು ವಹಿಸಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ. 2008ರಲ್ಲಿ ರಾಜಕೀಯ ಸುಧಾರಣಾ ಕ್ರಮಗಳಡಿ ಅಂಗೀಕರಿಸಲಾದ ವಿಶೇಷ ಅಧ್ಯಕ್ಷೀಯ ವ್ಯವಸ್ಥೆಯನ್ನು ರದ್ದುಗೊಳಿಸಿ, ದೇಶದಲ್ಲಿ ಸಂಸದೀಯ ಪ್ರಜಾಪ್ರಭುತ್ವವನ್ನು ಜಾರಿಗೊಳಿಸುವುದಾಗಿ ನಶೀದ್ ಭರವಸೆ ನೀಡಿದ್ದರು. ಯಾಮೀನ್ ಮಾಲ್ದೀವ್ಸ್ ಅಧ್ಯಕ್ಷರಾಗಿದ್ದಾಗ ನಶೀದ್ ವಿರುದ್ಧ ಭಯೋತ್ಪಾದನೆಯ ಆರೋಪ ಹೊರಿಸಿ, ಅವರಿಗೆ 13 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಆದಾಗ್ಯೂ ಕಳೆದ ಸೆಪ್ಟೆಂಬರ್‌ನಲ್ಲಿ ಮಾಲ್ದೀವ್ಸ್ ಅಧ್ಯಕ್ಷರಾಗಿ ಮುಹಮ್ಮದ್ ಸಾಲಿಹ್ ಆಯ್ಕೆಯಾದ ಬಳಿಕ ನಶೀದ್ ಸ್ವದೇಶಕ್ಕೆ ವಾಪಸಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News