ಅಮೆರಿಕ ಕಾಂಗ್ರೆಸ್‌ನ ಮುಸ್ಲಿಂ ಸಂಸದೆಗೆ ಜೀವ ಬೆದರಿಕೆ: ಆರೋಪಿಯ ಬಂಧನ

Update: 2019-04-07 17:51 GMT

ನ್ಯೂಯಾರ್ಕ್,ಎ.7: ಅಮೆರಿಕದ ಡೆಮೊಕ್ರಾಟಿಕ್ ಪಕ್ಷದ ಪ್ರತಿನಿಧಿ ಹಾಗೂ ಮಿನೆಸ್ಸೊಟಾದ ಅಮೆರಿಕ ಕಾಂಗ್ರೆಸ್‌ನ ಮುಸ್ಲಿಂ ಸದಸ್ಯೆ ಇಲ್ಹಾನ್ ಉಮರ್ ವರ ಮೇಲೆ ಹಲ್ಲೆ ನಡೆಸುವ ಹಾಗೂ ಕೊಲೆಗೈಯುವ ಬೆದರಿಕೆ ಹಾಕಿದ ಆರೋಪದಲ್ಲಿ. 55 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

  ಆರೋಪಿಯನ್ನು ನ್ಯೂಯಾರ್ಕ್ ನಗರದ ಆ್ಯಡಿಸನ್ ಪ್ರದೇಶದ ನಿವಾಸಿ ಪ್ಯಾಟ್ರಿಕ್ ಕಾರ್ಲಿನಿಯೊ ಜೂನಿಯರ್ ಎಂದು ಗುರುತಿಸಲಾಗಿದೆ. ಆತ ಉಮರ್ ಅವರ ಸಿಬ್ಬಂದಿಯೊಬ್ಬರಿಗೆ ಮಾರ್ಚ್ 21ರಂದು ದೂರವಾಣಿ ಕರೆ ಮಾಡಿ, '' ನೀವು ಮುಸ್ಲಿಂ ಬ್ರದರ್‌ಹುಡ್ ಸಂಘಟನೆಯ ಪರವಾಗಿ ಕೆಲಸ ಮಾಡುತ್ತಿದ್ದೀರಾ?. ನೀವ್ಯಾಕೆ ಆಕೆಗಾಗಿ (ಉಮರ್) ಕೆಲಸ ಮಾಡುತ್ತಿದ್ದೀರಿ. ಆಕೆ ಭಯೋತ್ಪಾದಕಿ. ನಾನು ಆಕೆಯ ತಲೆಬುರುಡೆಗೆ ಬುಲೆಟ್ ಹೊಡೆಯಲಿದ್ದೇನೆ''ಎಂದು ಬೆದರಿಕೆ ಹಾಕಿದ್ದಾನೆಂದು ಆರೋಪಿಸಲಾಗಿದೆ.

ಈ ದೂರವಾಣಿ ಬೆದರಿಕೆ ಕರೆ ಬಗ್ಗೆ ಉಮರ್ ಅವರ ಸಿಬ್ಬಂದಿ ಅಮೆರಿಕ ಕ್ಯಾಪಿಟಲ್ ಪೊಲೀಸರಿಗೆ ದೂರು ನೀಡಿದ್ದರು. ದೂರವಾಣಿ ಸಂಭಾಷಣೆಯ ವೇಳೆ ಉದ್ರಿಕ್ತಗೊಂಡಂತೆ ವರ್ತಿಸಿದ್ದ ಕಾರ್ಲಿನಿಯೊ ತನ್ನ ಹೆಸರನ್ನು ಕೂಡಾ ತಿಳಿಸಿದ್ದ ಹಾಗೂ ತನ್ನನ್ನು ಸಂಪರ್ಕಿಸುವ ವಿವರಗಳನ್ನ ನೀಡಿದ್ದನೆಂದು ಎಫ್‌ಬಿಐನ ವಿಶೇಷ ಏಜೆಂಟ್ ಒಬ್ಬರು ಅಫಿದಾವಿತ್‌ನಲ್ಲಿ ತಿಳಿಸಿದ್ದರು. ವಿಚಾರಣೆಯ ವೇಳೆ ಕಾರ್ಲಿಯೊ ತನ್ನನ್ನು ದೇಶಭಕ್ತನೆಂದು ಹೇಳಿಕೊಂಡಿದ್ದು, ತನ್ನ ಅಧ್ಯಕ್ಷರ ಬಗ್ಗೆ ಮೆಚ್ಚುಗೆ ಇದೆಯೆಂದು ಹೇಳಿದ್ದಾನೆ. ಅಮೆರಿಕ ಸರಕಾರದಲ್ಲಿ 'ತೀವ್ರವಾದಿ ' ಮುಸ್ಲಿಮರು ಇರುವುದನ್ನು ತಾನು ದ್ವೇಷಿಸುವುದಾಗಿ ಆತ ಹೇಳಿದ್ದಾನೆಂದು ಎಫ್‌ಬಿಐ ಅಫಿದಾವಿತ್ ತಿಳಿಸಿದೆ.

   ಕಾರ್ಲಿನಿಯೋನನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನ ವಿಚಾರಣೆಯನ್ನು ಎಪ್ರಿಲ್ 10ರಂದು ನ್ಯಾಯಾಧೀಶರು ಮುಂದೂಡಿದ್ದಾರೆ. ಅಮೆರಿಕ ಸರಕಾರದ ವಿದೇಶಾಂಗ ವ್ಯವಹಾರಗಳ ಸಮಿತಿಯ ಸದಸ್ಯೆಯಾದ ಇಲ್ಹಾನ್ ಉಮರ್, ಕಳೆದ ನವೆಂಬರ್‌ನಲ್ಲಿ ಅಮೆರಿಕ ಕಾಂಗ್ರೆಸ್‌ಗೆ ಪ್ರಥಮ ಬಾರಿಗೆ ಆಯ್ಕೆಯಾದ ಇಬ್ಬರು ಮುಸ್ಲಿಂ ಮಹಿಳೆಯರಲ್ಲೊಬ್ಬರಾಗಿದ್ದಾರೆ. ಆದರೆ ಈ ಜೀವಬೆದರಿಕೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ಉಮರ್ ನಿರಾಕರಿಸಿದ್ದಾರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News