ಹವಾಮಾನ ಬದಲಾವಣೆಯಿಂದ ಈ ದೇಶದ 2 ಕೋಟಿ ಮಕ್ಕಳ ಬದುಕು ಅಪಾಯದಲ್ಲಿ....

Update: 2019-04-08 17:39 GMT

ಢಾಕಾ (ಬಾಂಗ್ಲಾದೇಶ), ಎ. 8: ಹವಾಮಾನ ಬದಲಾವಣೆಯೊಂದಿಗೆ ನಂಟು ಹೊಂದಿದ ವಿನಾಶಕಾರಿ ಪ್ರವಾಹ, ಚಂಡಮಾರುತ ಮತ್ತು ಇತರ ಪ್ರಾಕೃತಿಕ ವಿಕೋಪಗಳ ಭೀಕರ ಪರಿಣಾಮಗಳಿಂದಾಗಿ ಬಾಂಗ್ಲಾದೇಶದ ಸುಮಾರು ಎರಡು ಕೋಟಿ ಮಕ್ಕಳ ಪ್ರಾಣ ಮತ್ತು ಭವಿಷ್ಯ ಅಪಾಯದಲ್ಲಿವೆ ಎಂದು ವಿಶ್ವಸಂಸ್ಥೆಯ ಮಕ್ಕಳ ಘಟಕ ಯುನಿಸೆಫ್ ಶುಕ್ರವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಲಾಗಿದೆ.

ಯುನಿಸೆಫ್‌ನ ಈ ಅಂದಾಜಿನಲ್ಲಿ ಮ್ಯಾನ್ಮಾರ್‌ನ ಲಕ್ಷಾಂತರ ರೊಹಿಂಗ್ಯಾ ನಿರಾಶ್ರಿತ ಮಕ್ಕಳು ಸೇರಿದ್ದಾರೆ. ಮ್ಯಾನ್ಮಾರ್ ಸೇನೆಯ ದಮನ ಕಾರ್ಯಾಚರಣೆಗೆ ಬೆದರಿ ಆ ದೇಶದಿಂದ ಪಲಾಯನಗೈದಿರುವ ಲಕ್ಷಾಂತರ ಮಕ್ಕಳು ಬಾಂಗ್ಲಾದೇಶದ ಕರಾವಳಿ ಜಿಲ್ಲೆ ಕಾಕ್ಸ್ ಬಜಾರ್‌ನ ಕೊಳಕು ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.

130ಕ್ಕೂ ಅಧಿಕ ನದಿಗಳು ಹರಿಯುವ ಹಾಗೂ ತಗ್ಗುಪ್ರದೇಶದಲ್ಲಿರುವ ಬಾಂಗ್ಲಾದೇಶದ ಹಳ್ಳಿಗಳಿಂದ ಪ್ರತಿ ವರ್ಷ ಭಾರೀ ಸಂಖ್ಯೆಯಲ್ಲಿ ಜನರು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಅವರ ಕೃಷಿ ಭೂಮಿಯು ನಿರಂತರ ಪ್ರವಾಹಗಳಿಗೆ ಸಿಲುಕಿರುವುದರಿಂದ ಅಥವಾ ಅವರ ಹೊಲಗಳಲ್ಲಿ ಉಪ್ಪು ನೀರಿನ ಅಂಶ ಹೆಚ್ಚಿರುವುದರಿಂದ ಅಥವಾ ನದಿ ದಂಡೆ ಕೊರೆತದಿಂದಾಗಿ ಅವರು ಜೀವನೋಪಾಯವನ್ನು ಕಳೆದುಕೊಂಡು ವಲಸೆ ಹೋಗುವ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.

ಬಿಕ್ಕಟ್ಟಿನಿಂದ ಬದುಕುಳಿಯುವುದಕ್ಕಾಗಿ ಮಕ್ಕಳನ್ನು ಲೈಂಗಿಕ ದಂಧೆಗೆ ಅಥವಾ ಮದುವೆಗೆ ತಳ್ಳಲಾಗುತ್ತಿದೆ ಎಂದು ವರದಿ ಹೇಳಿದೆ.

ಅತ್ಯಂತ ಹೆಚ್ಚಿನ ಸಮಸ್ಯೆಗೆ ಒಳಗಾಗಿರುವ ಸುಮಾರು 1.2 ಕೋಟಿ ಮಕ್ಕಳು ಬೃಹತ್ ನದಿಗಳ ಸುತ್ತಮುತ್ತ ವಾಸಿಸುತ್ತಿದ್ದಾರೆ ಹಾಗೂ ಈ ನದಿಗಳ ದಂಡೆಗಳು ನಿಯಮಿತವಾಗಿ ಒಡೆಯುತ್ತಿವೆ ಎಂದು ಯುನಿಸೆಫ್‌ನ ಢಾಕಾ ವಕ್ತಾರ ಜೀನ್-ಜಾಕಸ್ ಸೈಮನ್ ಎಪಿ ಸುದ್ದಿಸಂಸ್ಥೆಗೆ ತಿಳಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News