65,000 ಎಚ್-1ಬಿ ವೀಸಾಗಳಿಗೆ ಬೇಕಾಗುವಷ್ಟು ಅರ್ಜಿ ಸ್ವೀಕಾರ

Update: 2019-04-08 17:44 GMT

ವಾಶಿಂಗ್ಟನ್, ಎ. 8: 2020ರ ವರ್ಷಕ್ಕಾಗಿ ನೀಡುವ 65,000 ಎಚ್-1ಬಿ ವೀಸಾಗಳಿಗಾಗಿ ಸಾಕಷ್ಟು ಅರ್ಜಿಗಳು ಬಂದಿವೆ ಎಂದು ಅಮೆರಿಕ ಶುಕ್ರವಾರ ತಿಳಿಸಿದೆ.

ಈ ವೀಸಾಗಳನ್ನು ಅಮೆರಿಕದ ಹೊಸ ಕಾನೂನಿನ ಅಡಿಯಲ್ಲಿ ಮೊದಲ ಬಾರಿಗೆ ವಿತರಣೆ ಮಾಡಲಾಗುತ್ತಿದೆ. ಹೊಸ ಕಾನೂನು ಅಮೆರಿಕದ ಕಾಲೇಜುಗಳಿಂದ ಉನ್ನತ ಪದವಿಗಳನ್ನು ಪಡೆದಿರುವ ವಿದೇಶಿಯರಿಗೆ ಆದ್ಯತೆ ನೀಡುತ್ತದೆ. ಭಾರತೀಯ ಪದವಿಗಳನ್ನು ಹೊಂದಿರುವವರಿಗೆ ಈ ಕಾನೂನಿನಿಂದ ಪ್ರಯೋಜನವಿಲ್ಲ ಎನ್ನಲಾಗಿದೆ.

‘‘2020ರ ಹಣಕಾಸು ವರ್ಷಕ್ಕಾಗಿ ಸಂಸತ್ ನಿರ್ದೇಶನದಂತೆ ನೀಡಬೇಕಾದ 65,000 ಎಚ್-1ಬಿ ವೀಸಾಗಳಿಗಾಗಿ ಬೇಕಾಗುವಷ್ಟು ಅರ್ಜಿಗಳು ಬಂದಿವೆ’’ ಎಂದು ವೀಸಾ ವಿತರಣೆಯ ಜವಾಬ್ದಾರಿ ಹೊತ್ತಿರುವ ಅಮೆರಿಕ ಪೌರತ್ವ ಮತ್ತು ವಲಸೆ ಇಲಾಖೆ ತಿಳಿಸಿದೆ.

ಅಮೆರಿಕದಿಂದ ಪಡೆದ ಪದವಿಯ ಅಗತ್ಯವಿರದ 20,000 ಎಚ್-1ಬಿ ವೀಸಾಗಳಿಗಾಗಿ ಬೇಕಾದಷ್ಟು ಅರ್ಜಿಗಳು ಬಂದಿವೆಯೇ ಎಂಬುದನ್ನು ಇಲಾಖೆಯು ನಂತರ ನಿರ್ಧರಿಸುತ್ತದೆ ಎಂದಿದೆ.

ಅಮೆರಿಕದಲ್ಲಿ ವಿಶೇಷ ಕೌಶಲದ ಹುದ್ದೆಗಳನ್ನು ನಿಭಾಯಿಸುವ ವಿದೇಶಿಯರಿಗೆ ಎಚ್-1ಬಿ ವೀಸಾಗಳನ್ನು ನೀಡಲಾಗುತ್ತದೆ. ಸಾಂಪ್ರದಾಯಿಕವಾಗಿ, ಒಟ್ಟು 85,000 ಎಚ್-1ಬಿ ವೀಸಾಗಳ ಪೈಕಿ 70 ಶೇಕಡಕ್ಕೂ ಅಧಿಕ ಭಾಗವನ್ನು ಭಾರತೀಯರೇ ಪಡೆಯುತ್ತಾ ಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News