‘ಇಸ್ರೋ’ ಜೊತೆಗಿನ ಸಹಕಾರ ಮುಂದುವರಿಸಲು ‘ನಾಸಾ’ ನಿರ್ಧಾರ

Update: 2019-04-08 18:29 GMT

ವಾಶಿಂಗ್ಟನ್, ಎ. 8: ಅಮೆರಿಕ ಸರಕಾರದ ಒತ್ತಡಕ್ಕೊಳಗಾಗಿ ಎಂಬಂತೆ, ಭಾರತದ ಬಾಹ್ಯಾಕಾಶ ಸಂಸ್ಥೆ ‘ಇಸ್ರೋ’ ಜೊತೆಗಿನ ಸಹಕಾರವನ್ನು ಮುಂದುವರಿಸಲು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ನಿರ್ಧರಿಸಿದೆ.

ಭಾರತ ಮಾರ್ಚ್ 27ರಂದು ನಡೆಸಿದ ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆಯಿಂದಾಗಿ ಬಾಹ್ಯಾಕಾಶದಲ್ಲಿ ಅವಶೇಷಗಳು ಸೃಷ್ಟಿಯಾಗಿವೆ ಎಂದು ಆರೋಪಿಸಿದ್ದ ನಾಸಾ, ಭಾರತದೊಂದಿಗಿನ ಸಹಕಾರವನ್ನು ಅಮಾನತಿನಲ್ಲಿಡಲು ಮುಂದಾಗಿರುವುದನ್ನು ಸ್ಮರಿಸಬಹುದಾಗಿದೆ.

ಭಾರತ ನಡೆಸಿರುವ ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆಯು ‘‘ಅತ್ಯಂತ ಭಯಂಕರ ಸಂಗತಿ’’ ಎಂಬುದಾಗಿ ನಾಸಾ ಮುಖ್ಯಸ್ಥ ಜಿಮ್ ಬ್ರೈಡನ್‌ಸ್ಟೈನ್ ಬಣ್ಣಿಸಿರುವುದನ್ನು ಸ್ಮರಿಸಬಹುದಾಗಿದೆ.

ಗುರುವಾರ ಇಸ್ರೋ ಅಧ್ಯಕ್ಷ ಕೆ. ಶಿವನ್‌ಗೆ ಪತ್ರವೊಂದನ್ನು ಬರೆದಿರುವ ಜಿಮ್, ‘‘ನಿಮ್ಮೊಂದಿಗಿನ ನಮ್ಮ ಭಾಗೀದಾರಿಕೆಯ ಅನುಸಾರ, ನಾಸಾ-ಇಸ್ರೋ ಮಾನವ ಬಾಹ್ಯಾಕಾಶ ಹಾರಾಟ ಕ್ರಿಯಾ ಗುಂಪು, ಗ್ರಹ ವಿಜ್ಞಾನ ಕ್ರಿಯಾ ಗುಂಪು, ಅಮೆರಿಕ-ಭಾರತ ಭೂ ವಿಜ್ಞಾನ ಕ್ರಿಯಾ ಗುಂಪು ಮತ್ತು ಹೇಲಿಯೊಫಿಸಿಕ್ಸ್ ಕ್ರಿಯಾ ಗುಂಪುಗಳಲ್ಲಿ ನಮ್ಮ ಸಹಕಾರವನ್ನು ಮುಂದುವರಿಸುತ್ತೇವೆ’’ ಎಂದು ಹೇಳಿದ್ದಾರೆ.

ಬದಲಾದ ನಿರ್ಧಾರಕ್ಕೆ ಕಾರಣಗಳನ್ನು ಸ್ಪಷ್ಟಪಡಿಸಿರುವ ಅವರು, ‘‘ಶ್ವೇತಭವನದಿಂದ ಪಡೆದಿರುವ ಮಾರ್ಗದರ್ಶನದಂತೆ, ಭವಿಷ್ಯದಲ್ಲಿ ಈ ಗುಂಪುಗಳನ್ನು ಮುಂದುವರಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ’’ ಎಂದು ಅವರು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News