ಅಕ್ಟೋಬರ್-ನವೆಂಬರ್‌ನಲ್ಲಿ ಎರಡನೇ ಆವೃತ್ತಿಯ ಪ್ರೊ ವಾಲಿಬಾಲ್ ಲೀಗ್
ಹೊಸದಿಲ್ಲಿ, ಎ.10: ಎರಡನೇ ಆವೃತ್ತಿಯ ಪ್ರೊ ವಾಲಿಬಾಲ್ ಲೀಗ್ (ಪಿವಿಎಲ್) ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿದೆ ಎಂದು ಟೂರ್ನಿಯ ಸಂಘಟಕರು ಬುಧವಾರ ತಿಳಿಸಿದ್ದಾರೆ.
ಬೇಸ್‌ಲೈನ್ ವೆಂಚರ್ಸ್ ಹಾಗೂ ಭಾರತದ ವಾಲಿಬಾಲ್ ಒಕ್ಕೂಟಗಳ ಮುಂದಾಳತ್ವದಲ್ಲಿ ನಡೆದ ಮೊದಲ ಪಿವಿಎಲ್ ಈ ವರ್ಷದ ಫೆಬ್ರವರಿಯಲ್ಲಿ ಅಂತ್ಯಗೊಂಡಿತ್ತು. ಈ ಲೀಗ್‌ನ ಯಶಸ್ಸು ಸಂಘಟಕರಲ್ಲಿ ಎರಡನೇ ಲೀಗ್‌ನ್ನು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಆಯೋಜಿಸಲು ಉತ್ಸಾಹ ತುಂಬಿತ್ತು. 6 ಫ್ರಾಂಚೈಸಿಗಳು ಭಾಗವಹಿಸಿದ್ದ ಮೊದಲ ಲೀಗ್‌ನಲ್ಲಿ ಚೆನ್ನೈ ಸ್ಪಾರ್ಟನ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
‘‘ಮೊದಲ ಲೀಗ್‌ಗೆ ದೊರೆತ ಪ್ರತಿಕ್ರಿಯೆ ಅಪೂರ್ವವಾಗಿತ್ತು. ನಾವು ಹಾಕಿದ ಕಠಿಣ ಶ್ರಮಕ್ಕೆ ಸಿಕ್ಕ ಪುರಾವೆಯಾಗಿತ್ತು. ಈ ಹಿನ್ನೆಲೆಯಲ್ಲಿ ಎರಡನೇ ಆವೃತ್ತಿಯನ್ನು ಇನ್ನಷ್ಟು ಸ್ಮರಣೀಯವಾಗಿಸಲು ಶಕ್ತಿ ತುಂಬಿದೆ’’ ಎಂದು ಬೇಸ್‌ಲೈನ್ ವೆಂಚರ್ಸ್ ಸಂಸ್ಥೆಯ ಸಹ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ಮ್ಯಾನೇಜರ್ ತುಹಿನ್ ಮಿಶ್ರಾ ಹೇಳಿದ್ದಾರೆ. ಚೊಚ್ಚಲ ಆವೃತ್ತಿಯ ಪಿವಿಎಲ್ 33 ದೇಶಗಳಲ್ಲಿ ಪ್ರಸಾರಗೊಂಡಿತ್ತು. ಭಾರತೀಯ ಉಪಖಂಡದಲ್ಲಿ ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ (ಎಸ್‌ಪಿಎನ್) ಪ್ರಸಾರದ ಹಕ್ಕುಗಳನ್ನು ಹೊಂದಿದ್ದರೆ, ‘ದುಬೈ ಸ್ಪೋರ್ಟ್ಸ್’ ಥಾಯ್ಲೆಂಡ್ ಹಾಗೂ ಮಧ್ಯ ಪೂರ್ವ ಮತ್ತು ಉತ್ತರ ಆಫ್ರಿಕ ವಲಯ ಹಾಗೂ ಸಿಂಗ್‌ಟೆಲ್ ಸಿಂಗಾಪುರದಲ್ಲಿ ಪಂದ್ಯಗಳನ್ನು ಪ್ರಸಾರ ಮಾಡಿದವು. ಮೊದಲ ಲೀಗ್‌ವಿಶ್ವ ವಾಲಿಬಾಲ್‌ನಲ್ಲಿ ಹೆಸರು ಮಾಡಿರುವ ಡೇವಿಡ್ ಲೀ ಹಾಗೂ ಪೌಲ್ ಲಾಟ್‌ಮನ್ ಸೇರಿದಂತೆ ಹಲವರನ್ನು ಸೆಳೆದಿತ್ತು.