ಅಭ್ಯರ್ಥಿಗಳ ಕಿರುಪಟ್ಟಿ ಸಿಧ್ಧಪಡಿಸಿದ ಎಐಎಫ್‌ಎಫ್

Update: 2019-04-11 06:00 GMT

ಹೊಸದಿಲ್ಲಿ, ಎ.10: ಸುಮಾರು 2 ವರ್ಷಗಳಿಂದ ಖಾಲಿ ಬಿದ್ದಿರುವ ಸಂಸ್ಥೆಯ ತಾಂತ್ರಿಕ ನಿರ್ದೇಶಕ ಹುದ್ದೆಯನ್ನು ತುಂಬಲು ಅಖಿಲ ಭಾರತ ಫುಟ್ಬಾಲ್ ಒಕ್ಕೂಟ (ಎಐಎಫ್‌ಎಫ್) ಸಿದ್ಧತೆ ನಡೆಸಿದ್ದು, ನಾಲ್ವರು ಅಭ್ಯರ್ಥಿಗಳ ಕಿರುಪಟ್ಟಿಯನ್ನು ಸಿದ್ಧಪಡಿಸಿದೆ. ರಾಷ್ಟ್ರೀಯ ತಂಡದ ಕೋಚ್ ಹುದ್ದೆಗೆ ನೇಮಕಾತಿ ಆಗುವ ವೇಳೆಗೆ ನಿರ್ದೇಶಕ ಹುದ್ದೆಗೂ ಆಯ್ಕೆ ನಡೆಯುವ ಸಾಧ್ಯತೆಯಿದೆ.

ಕಳೆದ ಬಾರಿ ಇದೇ ಹುದ್ದೆ ನಿಭಾಯಿಸಿದ್ದ ಆಸ್ಟ್ರೇಲಿಯದ ಸ್ಕಾಟ್ ಒ’ ಡೊನ್ನೆಲ್, ಜಾರ್ಜಿಯದ ಗೊಯಿಝ್ ದರ್ಸಾಡ್, ರೋಮಾನಿಯದ ಡೋರು ಇಸಾಕ್ ಹಾಗೂ ಪೋರ್ಚುಗಲ್‌ನ ಜೋರ್ಗ್ ಕ್ಯಾಸ್ಟೆಲೊ ಈ ಪಟ್ಟಿಯಲ್ಲಿದ್ದಾರೆ. ಈ ಕುರಿತಾಗಿ ಮಾಜಿ ಆಟಗಾರ ಶ್ಯಾಮ್ ಥಾಪಾ ನೇತೃತ್ವದ ಎಐಎಫ್‌ಎಫ್ ತಾಂತ್ರಿಕ ಸಮಿತಿಯನ್ನು ಒಕ್ಕೂಟವು ಎ.15ರಂದು ಸಭೆಗೆ ಕರೆದಿದೆ.

‘‘ರಾಷ್ಟ್ರೀಯ ತಂಡದ ಕೋಚ್ ಹುದ್ದೆಯ ನೇಮಕಾತಿಯೆಡೆಗೆ ಎಲ್ಲ ಗಮನವಿದ್ದರೂ, ಎಐಎಫ್‌ಎಫ್ ತಾಂತ್ರಿಕ ನಿರ್ದೇಶಕ ಹುದ್ದೆಯ ನೇಮಕಾತಿಗೆ ಸಿದ್ಧತೆ ನಡೆಸಿದೆ. ಕೋಚ್ ಹುದ್ದೆಯ ನೇಮಕದ ವೇಳೆಯೇ ನಿರ್ದೇಶಕರ ನೇಮಕವೂ ನಡೆಯಲಿದೆ’’ ಎಂದು ಎಐಎಫ್‌ಎಫ್ ಮುಖ್ಯ ಅಧಿಕಾರಿಯೋರ್ವರು ಪಿಟಿಐಗೆ ಮಾಹಿತಿ ನೀಡಿದ್ದಾರೆ. ಥಾಪಾ ಎ.15ರಂದು ಈ ಕುರಿತು ಸಭೆ ಇರುವುದನ್ನು ಖಚಿತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News