ವಿಜಯ ಪತಾಕೆ ಹಾರಿಸಿದ ಹೈದರಾಬಾದ್

Update: 2019-04-21 18:26 GMT

ಹೈದರಾಬಾದ್, ಎ.21: ಏಕಪಕ್ಷೀಯವಾಗಿ ಸಾಗಿದ ಐಪಿಎಲ್‌ನ 38ನೇ ಪಂದ್ಯದಲ್ಲಿ ಜಾನಿ ಬೈರ್‌ಸ್ಟೋವ್ ಹಾಗೂ ಡೇವಿಡ್ ವಾರ್ನರ್ ಅವರ ಶತಕಾರ್ಧದ ಕೊಡುಗೆ ನೆರವಿನಿಂದ ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 9 ವಿಕೆಟ್‌ಗಳ ಸುಲಭ ಜಯ ದಾಖಲಿಸಿದೆ.

ಇಲ್ಲಿನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ರವಿವಾರ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 159 ರನ್ ಗಳಿಸಿತು. ಗೆಲ್ಲಲು ಸವಾಲಿನ ಮೊತ್ತ ಪಡೆದ ಹೈದರಾಬಾದ್ ಇನ್ನೂ 5 ಓವರ್‌ಗಳು ಬಾಕಿ ಇರುವಾಗಲೇ ಕೇವಲ 1 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿತು.

ಕೋಲ್ಕತಾ ಸತತ ಐದನೇ ಬಾರಿ ಸೋಲನುಭವಿಸಿತು. ಆರಂಭಿಕ ಆಟಗಾರ ಕ್ರಿಸ್ ಲಿನ್(51,47 ಎಸೆತ, 4 ಬೌಂಡರಿ, 1 ಸಿಕ್ಸರ್)ಹಾಗೂ ರಿಂಕು ಸಿಂಗ್(30, 25 ಎಸೆತ) ಅವರ ಪ್ರಯತ್ನದ ಹೊರತಾಗಿಯೂ ಕೆಕೆಆರ್ ಸೋಲಿನ ಸುಳಿಯಿಂದ ಹೊರ ಬರಲು ವಿಫಲವಾಯಿತು. ಲಿನ್ ಹಾಗೂ ಸುನೀಲ್ ನರೈನ್(25) ಮೊದಲ ವಿಕೆಟ್‌ಗೆ 42 ರನ್ ಸೇರಿಸಿ ಉತ್ತಮ ಆರಂಭವನ್ನೇ ನೀಡಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ರಿಂಕು ಸಿಂಗ್ ಹೊರತುಪಡಿಸಿ ಉಳಿದ ದಾಂಡಿಗರು ಜವಾಬ್ದಾರಿಯಿಂದ ಬ್ಯಾಟಿಂಗ್ ಮಾಡಲು ವಿಫಲರಾದರು. ಶುಭಮನ್ ಗಿಲ್(3), ದಿನೇಶ್ ಕಾರ್ತಿಕ್(6),ನಿತಿಶ್ ರಾಣಾ(11) ಹಾಗೂ ರಸೆಲ್(15)ಬ್ಯಾಟಿಂಗ್ ವೈಫಲ್ಯ ಕಂಡರು.

ವೇಗದ ಬೌಲರ್‌ಗಳಾದ ಖಲೀಲ್ ಅಹ್ಮದ್(3-33) ಹಾಗೂ ಭುವನೇಶ್ವರ ಕುಮಾರ್(2-35)ಐದು ವಿಕೆಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಕೋಲ್ಕತಾವನ್ನು 159 ರನ್‌ಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ವಾರ್ನರ್, ಬೈರ್‌ಸ್ಟೋವ್ ಅಬ್ಬರ: ಗೆಲ್ಲಲು 160 ರನ್ ಗುರಿ ಪಡೆದ ಹೈದರಾಬಾದ್ ತಂಡಕ್ಕೆ ವಾರ್ನರ್(67, 38 ಎಸೆತ, 3 ಬೌಂಡರಿ, 5 ಸಿಕ್ಸರ್)ಹಾಗೂ ಜಾನಿ ಬೈರ್‌ಸ್ಟೋವ್(ಔಟಾಗದೆ 80, 43 ಎಸೆತ, 7 ಬೌಂಡರಿ, 4 ಸಿಕ್ಸರ್)ಮೊದಲ ವಿಕೆಟ್‌ನಲ್ಲಿ 12.2 ಓವರ್‌ಗಳಲ್ಲಿ 131 ರನ್ ಕಲೆ ಹಾಕಿ ರನ್ ಚೇಸಿಂಗ್‌ಗೆ ಭದ್ರಬುನಾದಿ ಹಾಕಿಕೊಟ್ಟರು.

ಹೈದರಾಬಾದ್ ಗೆಲುವಿಗೆ 30 ರನ್ ಅಗತ್ಯವಿದ್ದಾಗ ವಾರ್ನರ್ ವಿಕೆಟ್ ಒಪ್ಪಿಸಿದರು. ಸ್ಪಿನ್ನರ್ ಪಿಯೂಷ್ ಚಾವ್ಲಾ ಎಸೆದ 15ನೇ ಓವರ್‌ನ ಕೊನೆಯ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಬೈರ್‌ಸ್ಟೋವ್ ತನ್ನದೇ ಶೈಲಿಯಲ್ಲಿ ಇನ್ನೂ 30 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದರು. ನಾಯಕ ಕೇನ್ ವಿಲಿಯಮ್ಸನ್ ಔಟಾಗದೆ 8 ರನ್ ಗಳಿಸಿದರು.

4 ಓವರ್‌ಗಳಲ್ಲಿ 33 ರನ್ ನೀಡಿ ಕೋಲ್ಕತಾದ ಅಗ್ರ ಸರದಿಯ ಮೂವರು ದಾಂಡಿಗರಿಗೆ ಪೆವಿಲಿಯನ್ ಹಾದಿ ತೋರಿಸಿದ ಖಲೀಲ್ ಅಹ್ಮದ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News