ಫೊಗ್ನಿನಿ ವಿರದ್ಧ ನಡಾಲ್‌ಗೆ ಆಘಾತ

Update: 2019-04-21 18:42 GMT

ಮೊಂಟೆ ಕಾರ್ಲೊ (ಮೊನಾಕೊ), ಎ.21: ಫ್ರೆಂಚ್ ಓಪನ್‌ಗೆ ಕೇವಲ ಐದು ವಾರಗಳು ಬಾಕಿ ಇರುವಂತೆಯೇ ನಡಾಲ್ ಅಪರೂಪದ ದೌರ್ಬಲ್ಯವನ್ನು ಪ್ರದರ್ಶಿಸಿದ್ದಾರೆ. ಶನಿವಾರ ರಾತ್ರಿ ನಡೆದ ಮೊಂಟೆ ಕಾರ್ಲೊ ಸೆಮಿಫೈನಲ್ ಹಣಾಹಣಿಯಲ್ಲಿ ಅವರು ಇಟಲಿಯ ಫ್ಯಾಬಿಯೊ ಫೊಗ್ನಿನಿ ವಿರುದ್ಧ 4-6, 2-6 ಸೆಟ್‌ಗಳಿಂದ ಸೋಲು ಕಂಡರು. 11 ಬಾರಿಯ ಮೊಂಟೆ ಕಾರ್ಲೊ ಚಾಂಪಿಯನ್ ನಡಾಲ್‌ರ ಸತತ 25 ಸೆಟ್‌ಗಳ ಗೆಲುವಿನ ಸರಣಿಯನ್ನು ತುಂಡರಿಸಿದ ಫೊಗ್ನಿನಿ, ಸರ್ಬಿಯ ಆಟಗಾರ ಡುಸಾನ್ ಲಾಜೊವಿಕ್ ವಿರುದ್ಧ ಫೈನಲ್ ಪಂದ್ಯಕ್ಕೆ ವೇದಿಕೆ ಅಣಿಗೊಳಿಸಿದರು. 11 ಬಾರಿ ಫ್ರೆಂಚ್ ಓಪನ್ ಕೂಡ ಗೆದ್ದಿರುವ ನಡಾಲ್, ಮೊಂಟೆ ಕಾರ್ಲೊದ ಬೀಸುಗಾಳಿಯ ವಾತಾವರಣದಲ್ಲಿ ಎಲ್ಲ ರೀತಿಯಿಂದ ಸಿದ್ಧವಾಗಿ ಬಂದಿದ್ದ ಫೊಗ್ನಿನಿ ವಿರುದ್ಧ ಮುಗ್ಗರಿಸಿದರು. ಈ ಟೂರ್ನಿಗೆ ಪ್ರವೇಶಿಸುವ ಮೊದಲು ಫೊಗ್ನಿನಿ ಸತತ ಐದು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದರು. ವಿಶ್ವದ ನಂ.18ನೇ ಸ್ಥಾನದಲ್ಲಿರುವ ಫೊಗ್ನಿನಿ, ನಡಾಲ್ ವಿರುದ್ಧ ಆಡಿರುವ 15 ಪಂದ್ಯಗಳಲ್ಲಿ ಸಾಧಿಸಿದ ನಾಲ್ಕನೇ ಗೆಲುವು ಇದಾಗಿದೆ ಹಾಗೂ ಟೆನಿಸ್‌ನ ಅತೀ ನಿಧಾನಗತಿಯ ಮೇಲ್ಮೈಯಲ್ಲಿ ಸಾಧಿಸಿದ 3ನೇ ಗೆಲುವು.

ಲಾಜೊವಿಕ್ ಫೈನಲ್‌ಗೆ

ಇದಕ್ಕೂ ಮೊದಲು ನಡೆದ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ರಶ್ಯದ ಡೇನಿಲ್ ಮೆಡ್ವಡೆವ್‌ರನ್ನು 7-5, 6-1ರಿಂದ ಸದೆಬಡಿದ ಸರ್ಬಿಯ ಆಟಗಾರ ಲಾಜೊವಿಕ್ ಟೂರ್ನಿಯ ಫೈನಲ್‌ಗೆ ಕಾಲಿಟ್ಟರು. ಆರಂಭದ ಸೆಟ್‌ನಲ್ಲಿ 0-3 ಹಾಗೂ 1-5ರಿಂದ ಹಿನ್ನಡೆಯಲ್ಲಿದ್ದ ಲಾಜೊವಿಕ್ ಬಳಿಕ ಚೇತರಿಸಿಕೊಂಡು ಗೆಲುವಿನ ನಗೆ ಬೀರಿದರು.

ಅಂಗಣದಲ್ಲಿ ಆವರಿಸಿದ್ದ ಬೀಸು ಗಾಳಿಯ ವಾತಾವರಣದಲ್ಲಿ 10ನೇ ಶ್ರೇಯಾಂಕದ ಮೆಡ್ವಡೆವ್ ಎದುರಾಳಿಗೆ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ಹತಾಶನಾಗಿದ್ದ ಎದುರಾಳಿ ವಿರುದ್ಧ ಎರಡನೇ ಸೆಟ್‌ನಲ್ಲಿ ಲಾಜೊವಿಕ್ ಆರಂಭದಲ್ಲೇ 4-0 ಮುನ್ನಡೆ ಸಾಧಿಸಿದರು. ಹಾಗೆಯೇ ಪಂದ್ಯವನ್ನು ತಮ್ಮತ್ತ ವಾಲಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News