ವಿಕಾಸ್, ನೀರಜ್‌ಗೆ ಗೆಲುವು

Update: 2019-04-21 18:43 GMT

ನ್ಯೂಯಾರ್ಕ್, ಎ.21: ಕಾಮನ್‌ವೆಲ್ತ್ ಹಾಗೂ ಏಶ್ಯನ್ ಗೇಮ್ಸ್ ಚಾಂಪಿಯನ್ ವಿಕಾಸ್ ಕ್ರಿಶನ್ ಅಮೆರಿಕದ ಎದುರಾಳಿ ನೊಯಾ ಕಿಡ್ ವಿರುದ್ಧ ಪ್ರತಿಷ್ಠಿತ ಮ್ಯಾಡಿಸನ್ ಸ್ಕ್ವಾರ್ ಗಾರ್ಡನ್ಸ್‌ನಲ್ಲಿ ನಡೆದ ಆರು ಸುತ್ತಿನ ಸೂಪರ್ ವೆಲ್ಟರ್ ವೇಟ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಒಮ್ಮತದ ತೀರ್ಪು ಪಡೆದು ಜಯಶಾಲಿಯಾದರು.

ಟೊರಾಂಟೊದಲ್ಲಿ ಡಬ್ಲುಬಿಸಿ ಏಶ್ಯ ವೇಲ್ಟರ್‌ವೇಟ್ ಚಾಂಪಿಯನ್ ನೀರಜ್ ಮೆಕ್ಸಿಕೊದ ಕಾರ್ಲೊಸ್ ಲೊಪೆಝ್ ಮೊರ್ಮೊಲೆಜೊರನ್ನು ಆರು ಸುತ್ತಿನ ಹಣಾಹಣಿಯಲ್ಲಿ ಮಣಿಸಿದರು.

ವಿಕಾಸ್ ನ್ಯೂ ಜೆರ್ಸಿಯಲ್ಲಿ ಹಿರಿಯ ಬಾಕ್ಸಿಂಗ್ ಕೋಚ್ ವಲಿ ಮೊಸೆಸ್ ಅವರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ. ಈ ಗೆಲುವಿನೊಂದಿಗೆ ವಿಕಾಸ್ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿದ್ದಾರೆ. ವಿಕಾಸ್ ಹಾಗೂ ನೀರಜ್ ಈ ಹಿಂದೆ ಒಟ್ಟಿಗೆ ತರಬೇತಿ ನಡೆಸಿದ್ದರು. ವಿಕಾಸ್ ಲೆಜೆಂಡರಿ ಬಾಬ್ ಅರ್ಮ್ಸ್ ಅವರ ಟಾಪ್ ರ್ಯಾಂಕ್ ಪ್ರೊಮೊಶನ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೆ, ನೀರಜ್ ಲೀ ಬಾಕ್ಸ್‌ಟೆರ್ ಪ್ರೊಮೊಶನ್ಸ್‌ನೊಂದಿಗೆ ಸಹಿ ಹಾಕಿದ್ದಾರೆ.

ವಿಕಾಸ್ ಈ ವರ್ಷದ ಜನವರಿಯಲ್ಲಿ ಅಮೆರಿಕದ ಸ್ಟೀವನ್ ಅಂಡ್ರಾಡೆ ಅವರನ್ನು ಎರಡನೇ ಸುತ್ತಿನಲ್ಲಿ ಟೆಕ್ನಿಕಲ್ ನಾಕೌಟ್ ಮೂಲಕ ಸೋಲಿಸುವುದರೊಂದಿಗೆ ವೃತ್ತಿಪರ ಬಾಕ್ಸಿಂಗ್‌ನ ಚೊಚ್ಚಲ ಪಂದ್ಯದಲ್ಲೇ ಪರಿಣಾಮಕಾರಿ ಪ್ರದರ್ಶನ ನೀಡಿದ್ದರು.

ಮತ್ತೊಂದೆಡೆ, ನೀರಜ್ 16 ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಈ ಪೈಕಿ 11ರಲ್ಲಿ ಜಯ, 2ರಲ್ಲಿ ಡ್ರಾ ಹಾಗೂ ಮೂರರಲ್ಲಿ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News