ಚೆನ್ನೈ ಎದುರು ಆರ್‌ಸಿಬಿಗೆ ರೋಚಕ ಜಯ

Update: 2019-04-21 18:51 GMT

ಬೆಂಗಳೂರು, ಎ.21: ಇಲ್ಲಿಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರವಿವಾರ ನಡೆದ 39ನೇ ಐಪಿಎಲ್ ಪಂದ್ಯದಲ್ಲಿ ಆತಿಥೇಯ ಆರ್‌ಸಿಬಿ ತಂಡವು ಚೆನ್ನೈ ಸೂಪರ್ ಕಿಂಗ್ಸ್‌ನ್ನು 1 ರನ್‌ನಿಂದ ಮಣಿಸಿದೆ. 162 ರನ್ ಗುರಿ ಬೆನ್ನಟ್ಟಿದ್ದ ಚೆನ್ನೈ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 160 ರನ್ ಗಳಿಸಲಷ್ಟೇ ಶಕ್ತವಾಯಿತು

ಚೆನ್ನೈ ಪರ ಶೇನ್ ವಾಟ್ಸನ್ (5), ಎಫ್ ಡು ಫ್ಲೆಸಿಸ್ (5) ಹಾಗೂ ಸುರೇಶ್ ರೈನಾ (0) ಭಾರೀ ವೈಫಲ್ಯ ಅನುಭವಿಸಿದರು. ತಂಡದ ಮೊತ್ತ 17 ರನ್ ಆಗುವಷ್ಟರಲ್ಲಿ 3 ವಿಕೆಟ್ ಪತನಗೊಂಡವು. ಆ ಬಳಿಕ ಕೇದಾರ್ ಜಾಧವ್ (9, 9 ಎಸೆತ, 2 ಬೌಂಡರಿ) ಕೂಡ ಶೀಘ್ರ ವಿಕೆಟ್ ಒಪ್ಪಿಸಿದಾಗ ತಂಡದ ಸ್ಥಿತಿ ಚಿಂತಾಜನಕವಾಗಿತ್ತು. ಅಂಬಟಿ ರಾಯುಡು (29, 29 ಎಸೆತ, 2 ಬೌಂಡರಿ, 1 ಸಿಕ್ಸರ್ )ಹಾಗೂ ನಾಯಕ ಎಂ.ಎಸ್.ಧೋನಿ (ಅಜೇಯ 84, 48 ಎಸೆತ, 5 ಬೌಂಡರಿ, 7 ಸಿಕ್ಸರ್) 5ನೇ ವಿಕೆಟ್ ಜೊತೆಯಾಟದಲ್ಲಿ 55 ರನ್ ಸೇರಿಸಿ ಆಸರೆಯಾದರು. ಜಡೇಜ 11 ರನ್ ಗಳಿಸಿದರು. ಬ್ರಾವೊ (5) ವಿಫಲರಾದರು. ಆರ್‌ಸಿಬಿ ಪರ ಸ್ಟೇಯ್ನಾ ಹಾಗೂ ಉಮೇಶ್ ಯಾದವ್ ತಲಾ 2 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಬೆಂಗಳೂರು ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತ್ತು. ತಂಡದ ಪರ ಬ್ಯಾಟಿಂಗ್ ಆರಂಭಿಸಿದ ಪಾರ್ಥಿವ್ ಪಟೇಲ್ (53, 37 ಎಸೆತ, 2 ಬೌಂಡರಿ, 4 ಸಿಕ್ಸರ್ ) ಹಾಗೂ ನಾಯಕ ವಿರಾಟ್ ಕೊಹ್ಲಿ (9) 11 ರನ್ ಆಗುವಷ್ಟರಲ್ಲಿ ಬೇರ್ಪಟ್ಟರು. ದೀಪಕ್ ಚಹಾರ್ ಅವರು ವಿರಾಟ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಪಾರ್ಥಿವ್ ಹಾಗೂ ಎಬಿ ಡಿವಿಲಿಯರ್ಸ್ (25, 19 ಎಸೆತ, 3 ಬೌಂಡರಿ, 1 ಸಿಕ್ಸರ್) ಎರಡನೇ ವಿಕೆಟ್ ಜೊತೆಯಾಟದಲ್ಲಿ 47 ರನ್ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದರು. ವಿಲಿಯರ್ಸ್‌ರನ್ನು ಜಡೇಜಾ ಔಟ್ ಮಾಡಿದರು. ಆ ಬಳಿಕ ಆಕಾಶದೀಪ ನಾಥ್ (24, 20 ಎಸೆತ, 1 ಬೌಂಡರಿ, 1 ಸಿಕ್ಸರ್) ಒಂದಷ್ಟು ಹೊತ್ತು ಚೆನ್ನೈ ಬೌಲರ್‌ಗಳಿಗೆ ಸವಾಲಾದರು. ಮಾರ್ಕಸ್ ಸ್ಟೋನಿಸ್ (14, 13 ಎಸೆತ, 1 ಸಿಕ್ಸರ್) ಹಾಗೂ ಮೊಯಿನ್ ಅಲಿ (26, 16 ಎಸೆತ, 5 ಬೌಂಡರಿ ) ಆರ್‌ಸಿಬಿ ಉತ್ತಮ ಮೊತ್ತ ಜಮೆ ಮಾಡಲು ನೆರವಾದರು.

ಚೆನ್ನೈ ಬೌಲರ್‌ಗಳಾದ ಚಹಾರ್ (25ಕ್ಕೆ 2), ಜಡೇಜಾ (29ಕ್ಕೆ 2) ಹಾಗೂ ಡ್ವೇನ್ ಬ್ರಾವೊ (34ಕ್ಕೆ 2) ತಲಾ 2 ವಿಕೆಟ್ ಪಡೆದು ಉತ್ತಮ ಬೌಲರ್ ಎನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News