2 ಬೆಳ್ಳಿ, 3 ಕಂಚು ಬಾಚಿಕೊಂಡ ಭಾರತ

Update: 2019-04-22 18:25 GMT

ದೋಹಾ, ಎ.22: ಏಶ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮೊದಲ ದಿನವಾದ ರವಿವಾರ ಭಾರತ ಎರಡು ಬೆಳ್ಳಿ ಹಾಗೂಮೂರು ಕಂಚಿನ ಪದಕಗಳನ್ನು ಜಯಿಸಿ ಗಮನ ಸೆಳೆಯಿತು.

ಜಾವೆಲಿನ್ ಎಸೆತಗಾರ್ತಿ ಅನ್ನು ರಾಣಿ ಹಾಗೂ 3000 ಮೀ. ಸ್ಟೀಪಲ್‌ಚೇಸರ್ ಅವಿನಾಶ್ ಸಬ್ಲೆ ತಲಾ ಒಂದು ಬೆಳ್ಳಿ ಜಯಿಸಿ ಮೊದಲ ದಿನ ಭಾರತ ಐದು ಪದಕ ಗೆಲ್ಲಲು ನೆರವಾದರು.

ಕನ್ನಡತಿ ಎಂ.ಆರ್.ಪೂವಮ್ಮ,5,000 ಮೀ. ಓಟಗಾರ್ತಿ ಪಾರುಲ್ ಚೌಧರಿ ಹಾಗೂ 10,000 ಮೀ. ಓಟಗಾರ ಗವಿತ್ ಮುರಳಿ ಕುಮಾರ್ ತಲಾ ಒಂದು ಕಂಚಿನ ಪದಕ ತನ್ನದಾಗಿಸಿಕೊಂಡರು. ಭಾರತದ ಖ್ಯಾತ ಓಟಗಾರ್ತಿ ಹಿಮಾ ದಾಸ್ 400 ಮೀ. ಓಟದ ಹೀಟ್ ವೇಳೆಯೇ ಗಾಯಗೊಂಡು ಸ್ಪರ್ಧೆಯಿಂದ ಹಿಂದೆ ಸರಿದರು.

ಭುವನೇಶ್ವರದಲ್ಲಿ ನಡೆದ 2017ರ ಆವೃತ್ತಿಯ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದ 26ರ ಹರೆಯದ ಅನ್ನು 60.22 ಮೀ.ದೂರಕ್ಕೆ ಜಾವೆಲಿನ್ ಎಸೆದು ಬೆಳ್ಳಿ ನಗೆ ಬೀರಿದರು. ಚೀನಾದ ಲಿಯು 65.83 ಮೀ.ದೂರಕ್ಕೆ ಜಾವೆಲಿನ್ ಎಸೆದು ಮೊದಲ ಸ್ಥಾನ ಪಡೆದಿದ್ದಾರೆ. ಜಾವೆಲಿನ್ ಸ್ಪರ್ಧೆಯಲ್ಲಿದ್ದ ಭಾರತದ ಇನ್ನೋರ್ವ ಅಥ್ಲೀಟ್ ಶರ್ಮಿಳಾ ಕುಮಾರಿ 54.48 ಮೀ. ದೂರಕ್ಕೆ ಜಾವೆಲಿನ್ ಎಸೆದು ಏಳನೇ ಸ್ಥಾನ ಪಡೆದರು.

ಪುರುಷರ 3,000 ಮೀ. ಸ್ಟೀಪಲ್‌ಚೇಸ್‌ನಲ್ಲಿ 8 ನಿಮಿಷ, 30.19 ಸೆಕೆಂಡ್‌ನಲ್ಲಿ ಗುರಿ ತಲುಪಿದ ಸಬ್ಲೆ ತನ್ನ ಚೊಚ್ಚಲ ಅಂತರ್‌ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಮೊದಲ ಪದಕ ಜಯಿಸಿದರು. 24ರ ಹರೆಯದ ಓಟಗಾರ್ತಿ ಪಾರುಲ್ ಮಹಿಳೆಯರ 5,000 ಮೀ. ಓಟದಲ್ಲಿ ವೈಯಕ್ತಿಕ ಶ್ರೇಷ್ಠ 15 ನಿಮಿಷ, 36.03 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು. ಈ ಮೂಲಕ ಕಳೆದ ತಿಂಗಳು ಫೆಡರೇಶನ್ ಕಪ್‌ನಲ್ಲಿ ನಿರ್ಮಿಸಿದ್ದ ತನ್ನ ಹಿಂದಿನ ವೈಯಕ್ತಿಕ ಶ್ರೇಷ್ಠ ದಾಖಲೆ(15:58.35)ಯನ್ನು ಉತ್ತಮಪಡಿಸಿಕೊಂಡರು.

ಸ್ಪರ್ಧೆಯಲ್ಲಿದ್ದ ಇತರ ಭಾರತೀಯ ಅಥ್ಲೀಟ್ ಸಂಜೀವನಿ ಜಾಧವ್(15:41.12)ನಾಲ್ಕನೇ ಸ್ಥಾನ ಪಡೆದರು. ಬಹರೈನ್‌ನ ವಿನ್‌ಫ್ರೆಡ್ ಯಾವಿ(15:28.87)ಹಾಗೂ ಬೊಂಟು ರೆಬಿಟು(15:29.60)ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಗೆದ್ದುಕೊಂಡರು.

28ರ ಹರೆಯದ ಹಿರಿಯ ಓಟಗಾರ್ತಿ ಪೂವಮ್ಮ ಮಹಿಳೆಯರ 400 ಮೀ. ಓಟದ ಫೈನಲ್‌ನಲ್ಲಿ 53.21 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು ಪೂವಮ್ಮ ಅವರ ಸಹ ಆಟಗಾರ್ತಿ ಹಿಮಾ ದಾಸ್ 400 ಮೀ.ಹೀಟ್ಸ್ ನಲ್ಲಿ ಬೆನ್ನುನೋವು ಕಾಣಿಸಿಕೊಂಡ ಕಾರಣ ಸ್ಪರ್ಧೆ ಪೂರ್ಣಗೊಳಿಸಲು ವಿಫಲರಾದರು.

ಪುರುಷರ 10,000ಮೀ. ಓಟದಲ್ಲಿ ಗವಿತ್ ಮುರಳಿ ವೈಯಕ್ತಿಕ ಶ್ರೇಷ್ಠ ಸಮಯ(28 ನಿಮಿಷ, 38.34 ಸೆಕೆಂಡ್)ದಲ್ಲಿ ಗುರಿ ತಲುಪಿ ಕಂಚಿನ ಪದಕ ಜಯಿಸಿದರು.

ಪುರುಷರ 400 ಮೀ. ಓಟದಲ್ಲಿ ಮುಹಮ್ಮದ್ ಅನಸ್ ಹಾಗೂ ಅರೋಕಿಯಾ ರಾಜೀವ್ ಫೈನಲ್‌ಗೆ ತೇರ್ಗಡೆಯಾದರು. ಸೆಮಿ ಫೈನಲ್ ರೇಸ್‌ನಲ್ಲಿ ರಾಜೀವ್ 45.96 ಸೆಕೆಂಡ್‌ನಲ್ಲಿ ಗುರಿ ತಲುಪಿದರೆ, ಅನಾಸ್ 46.10 ಸೆಕೆಂಡ್‌ನಲ್ಲಿ ಗುರಿ ತಲುಪಿ ಐದನೇ ಸ್ಥಾನ ಪಡೆದರು.

ಸರಿತಾಬೆನ್ ಗಾಯಕ್ವಾಡ್(58.17 ಸೆ.) ಹಾಗೂ ಎಂ.ಅರ್ಪಿತಾ(58.20)ತಮ್ಮಹೀಟ್ಸ್ ನ ಮೂಲಕ ಮಹಿಳೆಯರ 400 ಮೀ.ಹರ್ಡಲ್ಸ್ ನಲ್ಲಿ ಫೈನಲ್‌ಗೆ ತಲುಪಿದರು.ಪುರುಷರ 400 ಮೀ.ಹರ್ಡಲ್ಸ್‌ನಲ್ಲಿ ಎಂ.ಪಿ. ಜಬೀರ್(50.17 ಸೆ.)ಕೂಡ ಈ ಸಾಧನೆ ಮಾಡಿದರು.

ರಾಷ್ಟ್ರೀಯ ದಾಖಲೆವೀರ ಜಿನ್ಸನ್ ಜಾನ್ಸನ್ ಹಾಗೂ ಮುಹಮ್ಮದ್ ಅಫ್ಸಾಲ್ 800 ಮೀ. ಓಟದಲ್ಲಿ ಫೈನಲ್‌ಗೆ ಪ್ರವೇಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News