ಬಾಂಬ್ ಸ್ಫೋಟದ ಭಯಾನಕ ಅನುಭವ ತೆರೆದಿಟ್ಟ ಲಂಕಾ ಕ್ರಿಕೆಟಿಗ: ಸ್ವಲ್ಪದರಲ್ಲೇ ಬದುಕುಳಿದ ಶನಕ

Update: 2019-04-24 16:53 GMT

ಕೊಲಂಬೊ, ಎ.24: ನೆಗೊಂಬೊದ ಸೈಂಟ್ ಸೆಬಾಸ್ಟಿಯನ್ ಚರ್ಚ್‌ನಲ್ಲಿ ಈಸ್ಟರ್ ಸಂಡೇ ಬೆಳಗ್ಗೆ 8:45ಕ್ಕೆ ಬಾಂಬು ಸ್ಫೋಟಗೊಂಡಾಗ ಚರ್ಚ್‌ನಿಂದ ಕೆಲವೇ ನಿಮಿಷಗಳ ದೂರದಲ್ಲಿರುವ ತನ್ನ ನಿವಾಸದಲ್ಲಿದ್ದ ಶ್ರೀಲಂಕಾ ಕ್ರಿಕೆಟಿಗ ಶನಕ  ಶಬ್ದ ಕೇಳಿ ಬೆಚ್ಚಿಬಿದ್ದಿದ್ದರು. ಶನಕಾರ ತಾಯಿ ಹಾಗೂ ಅಜ್ಜಿ ಈಸ್ಟರ್ ಪ್ರಾರ್ಥನೆ ಸಲ್ಲಿಸಲು ಚರ್ಚ್‌ಗೆ ತೆರಳಿದ್ದರು. ಹೀಗಾಗಿ ಸ್ಫೋಟಗೊಂಡ ತಕ್ಷಣ ಅವರು ಚರ್ಚ್‌ನತ್ತ ಧಾವಿಸಿದರು.

 "ನಾನು ಕೂಡ ಆ ದಿನ ಈಸ್ಟರ್ ಪ್ರಾರ್ಥನೆ ಸಲ್ಲಿಸಲು ಬಯಸಿದ್ದೆ. ಆದರೆ, ದೀರ್ಘ ಪ್ರಯಾಣದಿಂದ ಸುಸ್ತಾಗಿದ್ದ ಕಾರಣ ಸಂಜೆ ಚರ್ಚ್‌ಗೆ ತೆರಳಲು ನಿರ್ಧರಿಸಿದ್ದೆ. ಸ್ಫೋಟ ನಡೆದ ತಕ್ಷಣ ಚರ್ಚ್‌ನತ್ತ ಹೋಗಿ ನೋಡಿದರೆ ಎಲ್ಲೆಡೆ ಮೃತದೇಹಗಳು ಛಿದ್ರಛಿದ್ರವಾಗಿ ಬಿದ್ದಿದ್ದವು. ಅದನ್ನು ನೋಡಿ ಒಂದು ಕ್ಷಣ ಭಯವಾಯಿತು''ಎಂದು ಶನಕ ಹೇಳಿದರು.

  ಶನಕ ತನ್ನ ತಾಯಿಯನ್ನು ಚರ್ಚ್‌ನ ಹೊರಗೆ ಪತ್ತೆ ಮಾಡಿದರು. ಅವರ ತಾಯಿ ಕಿಟಕಿ ಬಳಿ ನಿಂತಿದ್ದರು. ಹೀಗಾಗಿ ದೊಡ್ಡ ಸ್ಫೋಟದಿಂದ ಬಚಾವಾಗಿದ್ದರು.

"ಬಾಂಬು ಸ್ಫೋಟದ ವೇಳೆ ತನ್ನ ಅಜ್ಜಿ ಚರ್ಚ್ ಒಳಗೆ ಇದ್ದರು. ಹೀಗಾಗಿ ನಮಗೆ ಅವರು ಬದುಕುಳಿದ ನಂಬಿಕೆ ಇರಲಿಲ್ಲ. ಆದರೆ ಅವರು ಪವಾಡಸದೃಶವಾಗಿ ಪಾರಾಗಿದ್ದರು. ನನ್ನ ಅಜ್ಜಿಯ ಸುತ್ತಲಿದ್ದ ಜನರು ಬಾಂಬುಸ್ಫೋಟಕ್ಕೆ ಬಲಿಯಾಗಿದ್ದರು. ನಾನು ಇಬ್ಬರನ್ನ್ನೂ ಹತ್ತಿರದ ಆಸ್ಪತ್ರೆಗೆ ಕೊಂಡೊಯ್ದಿದ್ದೆ. ಆದರೆ, ಅಲ್ಲಿ ಭರ್ತಿಯಾಗಿದ್ದ ಕಾರಣ ಮತ್ತೊಂದು ಆಸ್ಪತ್ರೆಗೆ ಹೋದೆ. ಇಬ್ಬರೂ ಇವತ್ತು ಡಿಸ್ಚಾರ್ಚ್ ಆಗಿದ್ದಾರೆ''ಎಂದು ಶನಕ ಹೇಳಿದರು.

 "ನನ್ನ ಅಜ್ಜಿಯ ತಲೆಗೆ ಚೂಪಾದ ವಸ್ತು ತಾಗಿದ ಕಾರಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ನನ್ನ ತಾಯಿಗೆ ಶ್ರವಣ ಸಮಸ್ಯೆ ಕಂಡುಬಂದಿದೆ. ಮಂಗಳವಾರ ಚರ್ಚ್‌ನಲ್ಲಿ ನಡೆದ ಅಂತ್ಯಕ್ರಿಯೆ ವೇಳೆ ಭಾಗವಹಿಸಿದ್ದೇನೆ. ಸೆಬಾಸ್ಟಿಯನ್ ಚರ್ಚ್‌ನಲ್ಲಿ 100ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಆರು ಚರ್ಚ್‌ಗಳ ಪೈಕಿ ಇಲ್ಲಿ ಹೆಚ್ಚು ಸಾವು-ನೋವು ಸಂಭವಿಸಿದೆ. ಅಂತ್ಯಕ್ರಿಯೆ ವೇಳೆ ನನಗೆ ಪರಿಚಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆಗ ನನಗೆ ಮಾತೇ ಹೊರಡುತ್ತಿರಲಿಲ್ಲ. ದಾಳಿಯಲ್ಲಿ ನನ್ನ ಇಬ್ಬರು ಶಾಲಾ ಸಹಪಾಠಿಗಳು ಮೃತಪಟ್ಟಿದ್ದಾರೆ''ಎಂದರು.

ಶನಕ  ಬೌದ್ಧ ಧರ್ಮಕ್ಕೆ ಸೇರಿದವರು ಹಾಗೂ ಅವರ ತಾಯಿ ಕ್ಯಾಥೋಲಿಕ್. ಶ್ರೀಲಂಕಾದ ಆಲ್‌ರೌಂಡರ್ ಶನಕ ಈತನಕ 3 ಟೆಸ್ಟ್, 19 ಏಕದಿನ ಹಾಗೂ 27 ಟಿ-20 ಪಂದ್ಯಗಳನ್ನು ಆಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News