12,000 ಕೋ.ರೂ.ಗಳ ಗಡಿ ದಾಟಿದ ತಿರುಪತಿ ಬ್ಯಾಂಕ್ ಠೇವಣಿ !

Update: 2019-04-24 15:54 GMT

ತಿರುಪತಿ,ಎ.24: ತಿರುಮಲದ ಪ್ರಸಿದ್ಧ ಶ್ರೀವೆಂಕಟೇಶ್ವರ ದೇವಸ್ಥಾನದ ಆಡಳಿತವನ್ನು ನಿರ್ವಹಿಸುತ್ತಿರುವ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ವಿವಿಧ ಸರಕಾರಿ ಮತ್ತು ಖಾಸಗಿ ಬ್ಯಾಂಕುಗಳಲ್ಲಿರಿಸಿರುವ ನಿರಖು ಠೇವಣಿಗಳ ಮೊತ್ತ 12,000 ಕೋ.ರೂ.ಗಳನ್ನು ಮೀರಿದೆ.

ನಿರಖು ಠೇವಣಿಗಳಿಂದ ಟಿಟಿಡಿಗೆ ವಾರ್ಷಿಕ ಸುಮಾರು 845 ಕೋ.ರೂ.ಗಳ ಬಡ್ಡಿ ದೊರೆಯುತ್ತಿದೆ ಎಂದು ದೇವಳದ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

2,000 ವರ್ಷಗಳಷ್ಟು ಪುರಾತನವಾಗಿರುವ ಶ್ರೀವೆಂಕಟೇಶ್ವರ ದೇವಸ್ಥಾನವು ವರ್ಷದಿಂದ ವರ್ಷಕ್ಕೆ ಹೆಚ್ಚು ಶ್ರೀಮಂತವಾಗುತ್ತಿದೆ. ವಾರ್ಷಿಕ ಸುಮಾರು 31 ಶತಕೋಟಿ ರೂ.ಗಳ ಆದಾಯವನ್ನು ಹೊಂದಿದ್ದು,ವಿಶ್ಯಾದ್ಯಂತದಿಂದ ಸುಮಾರು 2.5 ಕೋ.ಭಕ್ತರು ದೇಗುಲಕ್ಕೆ ಭೇಟಿ ನೀಡುತ್ತಾರೆ ಎಂದರು.

ಟಿಟಿಡಿ ಬಳಿ ಸುಮಾರು 8.7 ಟನ್ ಶುದ್ಧ ಚಿನ್ನ ಮತ್ತು ಹರಳುಗಳಿಂದ ಕೂಡಿದ ಸುಮಾರು 550 ಕೆ.ಜಿ. ಚಿನ್ನಾಭರಣಗಳಿದ್ದು,ಇವೆಲ್ಲವೂ ಭಕ್ತರು ದೇವಸ್ಥಾನದ ಹುಂಡಿಗೆ ಅರ್ಪಿಸಿದ ಕಾಣಿಕೆಗಳಾಗಿವೆ. ಚಿನ್ನಾಭರಣಗಳನ್ನೂ ಶುದ್ಧಚಿನ್ನವಾಗಿ ಪರಿವರ್ತಿಸಲಾಗುವುದು ಎಂದು ಅವರು ತಿಳಿಸಿದರು.

8.7 ಟನ್ ಚಿನ್ನದ ಪೈಕಿ 1,938 ಕೆ.ಜಿ.ಚಿನ್ನವನ್ನು ಐಒಬಿಯಲ್ಲಿ ಮತ್ತು 5,387 ಕೆ.ಜಿ.ಚಿನ್ನವನ್ನು ಎಸ್‌ಬಿಐ ಬಳಿ ಠೇವಣಿಯಾಗಿರಿಸಲಾಗಿದೆ. ಪಿಎನ್‌ಬಿಯಲ್ಲಿದ್ದ 1,381 ಕೆ.ಜಿ.ಚಿನ್ನಾಭರಣಗಳು ಠೇವಣಿಯ ಅವಧಿಯು ಅಂತ್ಯಗೊಂಡ ಹಿನ್ನಲೆಯಲ್ಲಿ ಇತ್ತೀಚಿಗೆ ಟಿಟಿಡಿ ಖಜಾನೆಗೆ ವಾಪಸಾಗಿವೆ. ಶ್ರೀ ವೆಂಕಟೇಶ್ವರ ಮತ್ತು ಪರಿವಾರ ದೇವತೆಗಳ ವಿಗ್ರಹಗಳು ಭಾರೀ ಸಂಖ್ಯೆಯ ಪ್ರಾಚೀನ ಮತ್ತು ಅಮೂಲ್ಯ ಆಭರಣಗಳನ್ನು ಹೊಂದಿದ್ದು,ಇವು ಕಾಯಂ ಆಗಿ ದೇವಸ್ಥಾನದಲ್ಲಿಯೇ ಇರುತ್ತವೆ ಎಂದು ಅಧಿಕಾರಿ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News