ಅಮಿತ್ ಧಂಕರ್‌ಗೆ ಬೆಳ್ಳಿ ಪದಕ

Update: 2019-04-24 17:51 GMT

ಕ್ಸಿಯಾನ್(ಚೀನಾ), ಎ.24: ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪುರುಷರ ಫ್ರೀಸ್ಟೈಲ್ ಕುಸ್ತಿಪಟುಗಳು ಉತ್ತಮ ಪ್ರದರ್ಶನ ಮುಂದುವರಿಸಿದ್ದಾರೆ. ಅಮಿತ್ ಧಂಕರ್ ಬೆಳ್ಳಿ ಪದಕ ಜಯಿಸಿದರೆ, ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ರಾಹುಲ್ ಅವಾರೆ ಕಂಚಿನ ಪದಕ ಜಯಿಸಿದ್ದಾರೆ.

2013ರ ಆವೃತ್ತಿಯ ಚಾಂಪಿಯನ್‌ಶಿಪ್‌ನಲ್ಲಿ 66 ಕೆಜಿ ವಿಭಾಗದಲ್ಲಿ ಚಿನ್ನ ಜಯಿಸಿದ್ದ ಅಮಿತ್ ಈ ಟೂರ್ನಿಯ ಪುರುಷರ 74 ಕೆಜಿ ಫ್ರೀಸ್ಟೈಲ್ ಇವೆಂಟ್ ಫೈನಲ್‌ನಲ್ಲಿ ಕಝಕಿಸ್ತಾನದ ಡನಿಯರ್ ಕೈಸನೊವ್ ವಿರುದ್ಧ 0-5 ಅಂತರದಿಂದ ಸೋಲನುಭವಿಸಿ ಬೆಳ್ಳಿಗೆ ತೃಪ್ತಿಪಟ್ಟರು.

28ರ ಹರೆಯದ ಹರ್ಯಾಣದ ಕುಸ್ತಿಪಟು ಅಮಿತ್ ಅರ್ಹತಾ ಸುತ್ತಿನಲ್ಲಿ ಇರಾನ್‌ನ ಮುಹಮ್ಮದ್ ಅಸ್ಗರ್ ವಿರುದ್ಧ 2-1 ಅಂತರದಿಂದ ಜಯ ಸಾಧಿಸಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಎದುರಾಳಿ ಜಪಾನ್‌ನ ಯುಹಿ ಫುಜಿನಮಿ ಗಾಯಗೊಂಡು ನಿವೃತ್ತಿಯಾದರು. ಸೆಮಿ ಫೈನಲ್‌ನಲ್ಲಿ ಕಿರ್ಗಿಸ್ತಾನದ ಇಲ್‌ಗಿಝ್‌ರನ್ನು 5-0 ಅಂತರದಿಂದ ಮಣಿಸಿದ್ದರು.

2018ರಲ್ಲಿ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 57 ಕೆಜಿ ವಿಭಾಗದಲ್ಲಿ ಚಿನ್ನ ಜಯಿಸಿದ್ದ ಅವಾರೆ ಪುರುಷರ 61 ಕೆಜಿ ಫ್ರೀಸ್ಟೈಲ್ ವಿಭಾಗದ ಕಂಚಿನ ಪದಕಕ್ಕಾಗಿ ನಡೆದ ಪ್ಲೇ-ಆಫ್‌ನಲ್ಲಿ ಕೊರಿಯಾದ ಜಿನ್‌ಚೆಯೊಲ್ ಕಿಮ್ ಎದುರು 9-2 ಅಂತರದಿಂದ ಜಯ ಸಾಧಿಸಿ ಪದಕ ಜಯಿಸಿದರು.

ಬುಧವಾರ ಬೆಳ್ಳಿ ಹಾಗೂ ಕಂಚು ಜಯಿಸಿರುವ ಭಾರತ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 1 ಚಿನ್ನ, 2 ಬೆಳ್ಳಿ ಹಾಗೂ 2 ಕಂಚು ಜಯಿಸಿದೆ. ಮಂಗಳವಾರ ಬಜರಂಗ್ ಪೂನಿಯಾ(65ಕೆಜಿ)ಚಿನ್ನದ ಪದಕ ಜಯಿಸಿದ್ದರು. ಪ್ರವೀಣ್ ರಾಣಾ(79ಕೆಜಿ) ಹಾಗೂ ಸತ್ಯವರ್ತ್ ಕಡಿಯಾನ್(97ಕೆಜಿ)ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News