ಮಾಜಿ ಅಮೆರಿಕ ಓಪನ್ ಚಾಂಪಿಯನ್ ಸ್ಟೋಸರ್‌ಗೆ ಅಂಕಿತಾ ರೈನಾ ಶಾಕ್

Update: 2019-04-24 17:53 GMT

ಅನ್ನಿಂಗ್(ಚೀನಾ), ಎ.24: ಭಾರತದ ಅಗ್ರಮಾನ್ಯ ಸಿಂಗಲ್ಸ್ ಟೆನಿಸ್ ಆಟಗಾರ್ತಿ ಅಂಕಿತಾ ರೈನಾ ಬುಧವಾರ ನಡೆದ ಕುನ್‌ಮಿಂಗ್ ಓಪನ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಅಮೆರಿಕನ್ ಓಪನ್ ಮಾಜಿ ಚಾಂಪಿಯನ್ ಸಮಂತಾ ಸ್ಟೋಸರ್‌ರನ್ನು ಮಣಿಸಿ ವೃತ್ತಿಜೀವನದಲ್ಲಿ ಮಹತ್ವದ ಸಾಧನೆ ಮಾಡಿದರು.

ಏಶ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ರೈನಾ ಎರಡು ಗಂಟೆ ಹಾಗೂ ಐದು ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಸ್ಟೋಸರ್‌ರನ್ನು 7-5,2-6,7-5 ಸೆಟ್‌ಗಳಿಂದ ಮಣಿಸಿದರು. ಸ್ಟೋಸರ್ ವಿರುದ್ಧ ತನ್ನ ಎರಡನೇ ಮುಖಾಮುಖಿಯಲ್ಲಿ ಜಯ ಸಾಧಿಸಿದ ಅಂಕಿತಾ ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶಿಸಿದರು. ಈ ಹಿಂದಿನ ಪಂದ್ಯದಲ್ಲಿ ಸ್ಟೋಸರ್ ನೇರ ಸೆಟ್‌ಗಳಿಂದ ಜಯ ಸಾಧಿಸಿದ್ದರು. 26ರ ಹರೆಯದ ಭಾರತೀಯ ಆಟಗಾರ್ತಿ ಕೇವಲ ಮೂರು ಏಸ್ ಪಡೆಯಲು ಯಶಸ್ವಿಯಾದರು. ಸ್ಟೋಸರ್ ಏಳು ಏಸ್ ಪಡೆದರು. ಆದರೆ, ವಿಶ್ವದ ನಂ.77ನೇ ಆಟಗಾರ್ತಿ ಸ್ಟೋಸರ್, ಅಂಕಿತಾಗೆ ಹೋಲಿಸಿದರೆ ಅತ್ಯಂತ ಹೆಚ್ಚು ತಪ್ಪೆಸಗಿದರು. ಅಂಕಿತಾ ಮುಂದಿನ ಸುತ್ತಿನಲ್ಲಿ ಚೀನಾದ ಕೈ-ಲಿನ್ ಝಾಂಗ್‌ರನ್ನು ಎದುರಿಸಲಿದ್ದಾರೆ.

178ನೇ ರ್ಯಾಂಕಿನ ರೈನಾ ಈ ತಿಂಗಳಾರಂಭದಲ್ಲಿ ನಡೆದ 60,000 ಡಾಲರ್ ಬಹುಮಾನ ಮೊತ್ತದ ಐಟಿಎಫ್ ಟೂರ್ನಿಯಲ್ಲಿ ರನ್ನರ್ಸ್-ಅಪ್ ಆಗಿದ್ದರು. ಸಾನಿಯಾ ಮಿರ್ಝಾ ಹಾಗೂ ನಿರುಪಮಾ ವೈದ್ಯನಾಥನ್ ಬಳಿಕ ಸಿಂಗಲ್ಸ್ ನಲ್ಲಿ ಅಗ್ರ-200ರೊಳಗೆ ಸ್ಥಾನ ಪಡೆದ ಭಾರತದ ಮೂರನೇ ಆಟಗಾರ್ತಿಯಾಗಿದ್ದಾರೆ ಅಂಕಿತಾ.

2011ರ ಯುಎಸ್ ಓಪನ್ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್‌ರನ್ನು ಸೋಲಿಸಿದ್ದ ಸ್ಟೋಸರ್ ಚಾಂಪಿಯನ್‌ಪಟ್ಟಕ್ಕೇರಿದ್ದರು. ಮಾಜಿ ನಂ.1 ಡಬಲ್ಸ್ ಆಟಗಾರ್ತಿಯಾಗಿರುವ ಸ್ಟೋಸರ್ 2005ರ ಯುಎಸ್ ಓಪನ್, 2006ರ ಫ್ರೆಂಚ್ ಓಪನ್ ಹಾಗೂ 2019ರ ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಡಬಲ್ಸ್ ಪ್ರಶಸ್ತಿ ಸಹಿತ ಇತರ ಆರು ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News