ಮೊದಲ ತಡೆ ದಾಟಿದ ಸಿಂಧು, ಸೈನಾ

Update: 2019-04-24 17:56 GMT

ವುಹಾನ್ (ಚೀನಾ), ಎ.24: ತಮ್ಮ ಮೊದಲ ಸುತ್ತಿನ ಪಂದ್ಯಗಳಲ್ಲಿ ನಿರೀಕ್ಷಿತ ಜಯ ಸಾಧಿಸಿದ ಭಾರತದ ಪ್ರಮುಖ ಶಟ್ಲರ್‌ಗಳಾದ ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್ ಏಶ್ಯನ್ ಚಾಂಪಿಯನ್‌ಶಿಪ್ ಬ್ಯಾಡ್ಮಿಂಟನ್‌ನ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್ ಬೆಳ್ಳಿ ಪದಕ ವಿಜೇತೆ ಸಿಂಧು ಅವರು ಜಪಾನ್‌ನ ತಕಹಶಿ ಸಯಾಕಾ ಅವರನ್ನು 21-14, 21-7 ನೇರ ಗೇಮ್‌ಗಳಿಂದ ಮಣಿಸಿದರು. ಆರಂಭದಿಂದಲೂ ಪಂದ್ಯದಲ್ಲಿ ಪಾರಮ್ಯ ಮೆರೆದ ಸಿಂಧು, ಕೇವಲ 28 ನಿಮಿಷಗಳ ಅವಧಿಯಲ್ಲಿ ಎದುರಾಳಿಯ ಸವಾಲು ಮೀರಿ ನಿಂತರು. ನಾಲ್ಕನೇ ಶ್ರೇಯಾಂಕದ ಭಾರತೀಯ ಆಟಗಾರ್ತಿ ತಮ್ಮ ಮುಂದಿನ ಪಂದ್ಯದಲ್ಲಿ ಇಂಡೋನೇಶ್ಯದ ಖೈರುನ್ನೀಸಾ ಅವರನ್ನು ಎದುರಿಸಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ವಿಶ್ವದ ನಂ.9ನೇ ಆಟಗಾರ್ತಿ ಸೈನಾ, ಚೀನಾ ಆಟಗಾರ್ತಿ ಹಾನ್ ಯು ವಿರುದ್ಧ ಗೆಲ್ಲಲು ಬೆವರು ಹರಿಸಬೇಕಾಯಿತು. ಮೊದಲ ಗೇಮ್‌ನ್ನು ಕಳೆದುಕೊಂಡು ತಿರುಗೇಟು ನೀಡಿದ 7ನೇ ಶ್ರೇಯಾಂಕದ ಸೈನಾ, 12-21, 21-11, 21-17ರಿಂದ ಗೆಲುವಿನ ತೋರಣ ಕಟ್ಟಿದರು. ತಮ್ಮ ಮುಂದಿನ ಪಂದ್ಯದಲ್ಲಿ ಸೈನಾ, ದ.ಕೊರಿಯದ ಕಿಮ್ ಗಾ ಯುನ್‌ರನ್ನು ಎದುರಿಸಲಿದ್ದಾರೆ.

ಶ್ರೀಕಾಂತ್‌ಗೆ ಸೋಲು: ಏಶ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲೇ ಕಿಡಂಬಿ ಶ್ರೀಕಾಂತ್ ಆಘಾತಕಾರಿ ಸೋಲನುಭವಿಸಿ ಟೂರ್ನಿಯಿಂದ ನಿರ್ಗಮಿ ಸಿದ್ದಾರೆ.

ಕೇವಲ 44 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಶ್ರೀಕಾಂತ್ ಇಂಡೋನೇಶ್ಯದ ಶೆಸಾರ್ ಹಿರೇನ್ ರುಸ್ಟಾವಿಟೊ ವಿರುದ್ಧ 16-21, 20-22 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

ಶ್ರೀಕಾಂತ್ ಎರಡನೇ ಬಾರಿ ಶೆಸಾರ್ ಹಿರೇನ್‌ರನ್ನು ಎದುರಿಸಿದ್ದು, ಎರಡನೇ ಬಾರಿಯೂ ಸೋಲನುಭವಿಸಿದ್ದಾರೆ. 2011ರಲ್ಲಿ ಬಿಡಬ್ಲುಎಫ್ ವರ್ಲ್ಡ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಇಂಡೊನೇಶ್ಯಾದ ಆಟಗಾರ ಶ್ರೀಕಾಂತ್‌ರನ್ನು 11-21, 21-13,21-16 ಅಂತರದಿಂದ ಮಣಿಸಿದ್ದರು.

ಶ್ರೀಕಾಂತ್ ಈ ವರ್ಷ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇಂಡಿಯಾ ಓಪನ್‌ನಲ್ಲಿ ಫೈನಲ್‌ಗೆ ತಲುಪಿರುವ ಅವರು ಮಲೇಶ್ಯಾ ಹಾಗೂ ಸಿಂಗಾಪುರ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು. ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರನಿಂದ ಸಾಕಷ್ಟು ನಿರೀಕ್ಷಿಸಲಾಗುತ್ತಿದೆ.

►ಪುರುಷರ ಸಿಂಗ ಲ್ಸ್‌ನಲ್ಲಿ ಸಮೀರ್ ಮಿಂಚು

ಪುರುಷರ ಸಿಂಗಲ್ಸ್‌ನ ಪೈಪೋಟಿಯುತ ಪಂದ್ಯದಲ್ಲಿ ಭಾರತದ ಸಮೀರ್ ವರ್ಮಾ ಜಪಾನ್ ಆಟಗಾರ ಸಕಾಯಿ ಕಝುಮಸಾ ಅವರನ್ನು 21-13, 17-21, 21-18ರಿಂದ ಮಣಿಸಿ ಎರಡನೇ ಸುತ್ತು ಪ್ರವೇಶಿಸಿದರು. ವಿಶ್ವದ ನಂ.15 ಆಟಗಾರ ಸಮೀರ್ ಮುಂದಿನ ಪಂದ್ಯದಲ್ಲಿ ಹಾಂಕಾಂಗ್‌ನ ಎನ್‌ಜಿ ಕಾ ಲಾಂಗ್ ಅಂಗಸ್ ಸವಾಲು ಎದುರಿಸಲಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಅರ್ಜುನ್ ಎಂ.ಆರ್.- ರಾಮಚಂದ್ರನ್ ಶ್ಲೋಕ್ ಜೋಡಿಯು ಚೀನಾ ಜೋಡಿಗೆ ಸೋತರೆ, ಮಹಿಳಾ ಡಬಲ್ಸ್‌ನಲ್ಲಿ ಮೇಘನಾ ಜಕ್ಕಂಪುಡಿ-ಪೂರ್ವಿಶಾ ರಾಮ್ ಜೋಡಿಯು ಥಾಯ್ಲೆಂಡ್ ಜೋಡಿ ಎದುರು ಪರಾಭವಗೊಂಡು ಟೂರ್ನಿಯಿಂದ ನಿರ್ಗಮಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News