ಸತ್ಯನ್ ದ್ವಿತೀಯ ಸುತ್ತಿಗೆ ಲಗ್ಗೆ

Update: 2019-04-24 18:02 GMT

ಬುಡಾಪೆಸ್ಟ್, ಎ.24: ಐಟಿಟಿಎಫ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಜಿ.ಸತ್ಯನ್ ಸ್ಪರ್ಧೆಯಲ್ಲಿರುವ ಏಕೈಕ ಭಾರತೀಯನಾಗಿದ್ದು ರೊಮಾನಿಯದ ಕ್ರಿಸ್ಟಿಯನ್ ಪ್ಲೆಟಿ ಅವರನ್ನು 4-1 ಅಂತರದಿಂದ ಮಣಿಸಿ ದ್ವಿತೀಯ ಸುತ್ತಿಗೆ ತೇರ್ಗಡೆಯಾಗಿದ್ದಾರೆ.

ಇಲ್ಲಿ ನಡೆದ 64ನೇ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.28ನೇ ಆಟಗಾರ ಸತ್ಯನ್, ಕ್ರಿಸ್ಟಿಯನ್‌ರನ್ನು 11-5, 11-9, 6-11, 11-7, 11-6 ಅಂತರದಿಂದ ಸೋಲಿಸಿದರು. 32ನೇ ಸುತ್ತಿನಲ್ಲಿ ಬ್ರೆಝಿಲ್‌ನ ಹ್ಯೂಗೊ ಕಾಲ್‌ಡೆರಾನೊರನ್ನು ಎದುರಿಸಲಿದ್ದಾರೆ.

ಮೊದಲ ಸುತ್ತಿನಲ್ಲಿ ಬೆಲ್ಜಿಯಂನ ರಾಬಿನ್ ಡೆವೊಸ್‌ರನ್ನು 4-0 ಅಂತರದಿಂದ ಸೋಲಿಸಿದ್ದ ಸತ್ಯನ್ ಎರಡನೇ ಸುತ್ತಿನಲ್ಲಿ ಪ್ಲೆಟಿ ವಿರುದ್ಧ ಹೆಚ್ಚು ಪರದಾಟ ನಡೆಸದೇ ಮೇಲುಗೈ ಸಾಧಿಸಿದರು.

ಮತ್ತೊಂದೆಡೆ ಶರತ್ ಕಮಲ್ ಕ್ರೊಯೇಶಿಯದ ಟೊಮಿಸ್ಲಾವ್ ಪುಕರ್ ವಿರುದ್ಧ ನಡೆದ 64ನೇ ಸುತ್ತಿನ ಪಂದ್ಯದಲ್ಲಿ 9-11, 10-12, 11-8, 4-11, 9-11 ಸೆಟ್‌ಗಳಿಂದ ಸೋತಿದ್ದಾರೆ.

ಮೊದಲ ಸುತ್ತಿನಲ್ಲಿ ಉಜ್ಬೇಕಿಸ್ತಾನದ ರೊಕಿದ್ ವಿರುದ್ಧ 4-0 ಅಂತರದಿಂದ ಜಯ ಸಾಧಿಸಿದ್ದ 36ನೇ ರ್ಯಾಂಕಿನ ಕಮಲ್ ವಿಶ್ವದ ನಂ.58ನೇ ಆಟಗಾರನ ವಿರುದ್ಧ ಹಿಡಿತ ಸಾಧಿಸಲು ವಿಫಲರಾದರು.

ಮಾನವ್ ಥಕ್ಕರ್ 128ನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯದ ರಾಬರ್ಟ್ ಗಾರ್ಡೊಸ್ ವಿರುದ್ಧ ದಿಟ್ಟ ಹೋರಾಟ ನೀಡಿದ ಹೊರತಾಗಿಯೂ 13-11, 6-11, 11-8, 11-3, 2-11,10-12, 6-11 ಅಂತರದಿಂದ ಸೋತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News