​ಕೋಲ್ಕತಾ ನೈಟ್‌ರೈಡರ್ಸ್ ಮೇಲೆ ರಾಜಸ್ಥಾನ ಸವಾರಿ

Update: 2019-04-25 18:47 GMT

ಕೋಲ್ಕತಾ, ಎ.25: ಇಲ್ಲಿಯ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ 43ನೇ ಐಪಿಎಲ್ ಪಂದ್ಯದಲ್ಲಿ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ರಾಜಸ್ಥಾನ ರಾಯಲ್ಸ್ ತಂಡ 3 ವಿಕೆಟ್‌ಗಳಿಂದ ಮಣಿಸಿದೆ. 176 ರನ್ ಗುರಿ ಬೆನ್ನಟ್ಟಿದ ಸ್ಮಿತ್ ನೇತೃತ್ವದ ರಾಜಸ್ಥಾನ ಪಡೆ 19.2 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿ ಬೀಗಿತು.

ರಾಜಸ್ಥಾನ ಪರ ಅಜಿಂಕ್ಯಾ ರಹಾನೆ (34, 21 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ಸಂಜು ಸ್ಯಾಮ್ಸನ್ (22, 15 ಎಸೆತ, 2 ಸಿಕ್ಸರ್) ಮೊದಲ ವಿಕೆಟ್‌ಗೆ 53 ರನ್ ಸೇರಿಸಿ ಉತ್ತಮ ಆರಂಭವನ್ನೇ ಒದಗಿಸಿದರು. ಆ ಬಳಿಕ ಸ್ಮಿತ್ ಪಡೆ ದಿಢೀರ್ ಕುಸಿತ ಕಂಡಿತು. ತಂಡದ ಮೊತ್ತ 78 ರನ್ ಆಗುವಷ್ಟರಲ್ಲಿ ರಹಾನೆ, ಸ್ಯಾಮ್ಸನ್, ಸ್ಟೀವ್ ಸ್ಮಿತ್ (2) ಹಾಗೂ ಬೆನ್ ಸ್ಟೋಕ್ಸ್ (11, 10 ಎಸೆತ, 2 ಬೌಂಡರಿ) ವಿಕೆಟ್‌ಗಳು ಪಟಪಟನೆ ಉದುರಿದವು.

ಬೌಂಡರಿಯಲ್ಲಿ ಅದ್ಭುತ ಕ್ಯಾಚ್ ಮೂಲಕ ರಸೆಲ್ ಅವರು ಸ್ಟೋಕ್ಸ್‌ಗೆ ಪೆವಿಲಿಯನ್ ಹಾದಿ ತೋರಿಸಿದ್ದು ವಿಶೇಷವೆನಿಸಿತು. ಆ ಬಳಿಕ ಬಂದ ಸ್ಟುವರ್ಟ್ ಬಿನ್ನಿ (11, 11 ಎಸೆತ, 1 ಸಿಕ್ಸರ್) ಅಬ್ಬರಿಸಲಿಲ್ಲ. ಶ್ರೇಯಸ್ ಗೋಪಾಲ್ (18, 9 ಎಸೆತ, 4 ಬೌಂಡರಿ) ಆರಂಭದಲ್ಲಿ ಸಿಡಿದರೂ ಹೆಚ್ಚು ಮೊತ್ತ ಜಮೆ ಮಾಡಲಿಲ್ಲ. ರಿಯಾನ್ ಪರಾಗ್ (47, 31 ಎಸೆತ, 5 ಬೌಂಡರಿ, 2 ಸಿಕ್ಸರ್ ) ಹಾಗೂ ಜೋಫ್ರಾ ಅರ್ಚರ್ (27, 12 ಎಸೆತ, 2 ಬೌಂಡರಿ, 2 ಸಿಕ್ಸರ್ ) ರಾಜಸ್ಥಾನದ ಗೆಲುವಿಗೆ ಉತ್ತಮ ಕಾಣಿಕೆ ನೀಡಿದರು.

ಕೋಲ್ಕತಾ ಪರ ಬೌಲಿಂಗ್‌ನಲ್ಲಿ ಮಿಂಚಿದ ಪಿಯೂಷ್ ಚಾವ್ಲಾ 20 ರನ್ ನೀಡಿ 3 ವಿಕೆಟ್ ಪಡೆದರು. ನರೈನ್ 2 ವಿಕೆಟ್ ಪಡೆದರು.

   ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೋಲ್ಕತಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಕೋಲ್ಕತಾ ಪರ ಕ್ರಿಸ್ ಲಿನ್(0) ಹಾಗೂ ಶುಭಮನ್ ಗಿಲ್ (14, 14 ಎಸೆತ, 2 ಬೌಂಡರಿ) ಬ್ಯಾಟಿಂಗ್ ಆರಂಭಿಸಿದರು. ತಂಡ ಇನ್ನೂ ಖಾತೆ ತೆರೆಯದೇ ಇದ್ದಾಗ ಲಿನ್ ರೂಪದಲ್ಲಿ ಮೊದಲ ವಿಕೆಟ್ ಪತನವಾಯಿತು. ಆ ಬಳಿಕ ಶುಭಮನ್ ಹಾಗೂ ನಿತೀಶ್ ರಾಣಾ (21, 26 ಎಸೆತ, 3 ಬೌಂಡರಿ) 2ನೇ ವಿಕೆಟ್ ಜೊತೆಯಾಟದಲ್ಲಿ 31 ರನ್‌ಗಳ ಅಲ್ಪ ಕಾಣಿಕೆ ನೀಡಿದರು. ಗಿಲ್ ವಿಕೆಟ್ ಪತನದ ನಂತರ ರಾಣಾ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಶ್ರೇಯಸ್ ಗೋಪಾಲ್ ಎಸೆತದಲ್ಲಿ ಆ್ಯರೊನ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ದಾರಿ ಹಿಡಿದರು. ಸುನೀಲ್ ನರೈನ್ (11, 8 ಎಸೆತ, 1 ಬೌಂಡರಿ, 1 ಸಿಕ್ಸರ್ ) ಆರಂಭದಲ್ಲಿ ಅಬ್ಬರಿಸಿದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ. ನಾಯಕನ ಜವಾಬ್ದಾರಿ ಅರಿತು ಆಡಿದ ದಿನೇಶ್ ಕಾರ್ತಿಕ್ (ಅಜೇಯ 97, 50 ಎಸೆತ, 7 ಬೌಂಡರಿ, 9 ಸಿಕ್ಸರ್) ಹಾಗೂ ಆ್ಯಂಡ್ರೆ ರಸೆಲ್ (14, 14 ಎಸೆತ, 1 ಸಿಕ್ಸರ್) 5ನೇ ವಿಕೆಟ್‌ಗೆ 39 ರನ್ ಸೇರಿಸಿದರು. ರಸೆಲ್ ವಿಕೆಟ್ ಪತನದ ಬಳಿಕ ಬಂದ ಬ್ರಾಥ್‌ವೇಟ್ (5) ವಿಫಲರಾದರು. ರಾಜಸ್ಥಾನ ಪರ ಆ್ಯರೊನ್ 4 ಓವರ್‌ಗಳಲ್ಲಿ 20 ರನ್ ನೀಡಿ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News