ಮನು ಭಾಕರ್, ಸೌರಭ್‌ಗೆ ಚಿನ್ನದ ಗರಿ

Update: 2019-04-25 18:50 GMT

ಬೀಜಿಂಗ್, ಎ.25: ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನ ಮೂರನೇ ದಿನವಾದ ಗುರುವಾರ 10 ಮೀ. ಏರ್ ರೈಫಲ್ ಮಿಶ್ರ ತಂಡ ಹಾಗೂ 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗಗಳಲ್ಲಿ ಭಾರತ ತಂಡ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಟೂರ್ನಿಯಲ್ಲಿ ಪದಕದ ಖಾತೆ ತೆರೆದಿದೆ.

ಯುವ ಶೂಟರ್‌ಗಳಾದ ಮನು ಭಾಕರ್ ಹಾಗೂ ಸೌರಭ್ ಚೌಧರಿ 10 ಮೀ. ಏರ್ ಪಿಸ್ತೂಲ್‌ನ ಮಿಶ್ರ ತಂಡ ವಿಭಾಗದಲ್ಲಿ ಚಿನ್ನಕ್ಕೆ ಗುರಿಯಿಟ್ಟರು. ಇದಕ್ಕೂ ಮೊದಲು ಅಂಜುಮ್ ವೌದ್ಗಿಲ್ ಹಾಗೂ ದಿವ್ಯಾಂಶ್ ಸಿಂಗ್ ಪನ್ವಾರ್ 10 ಮೀ. ಏರ್ ರೈಫಲ್‌ನ ಮಿಶ್ರ ಟೀಮ್ ವಿಭಾಗದಲ್ಲಿ ಸ್ವರ್ಣ ಗೆದ್ದು ತಂಡದ ಪದಕ ಖಾತೆ ತೆರೆದಿದ್ದರು.

ನೂತನ ಪದ್ಧತಿಯಂತೆ, ಗರಿಷ್ಠ ಅಂಕ ಗಳಿಸಿದ ಅಗ್ರ ಎರಡು ತಂಡಗಳು ಫೈನಲ್ ಹಣಾಹಣಿ ನಡೆಸಬೇಕಿತ್ತು. ಅದರಂತೆ ಭಾರತದ ಮನು-ಸೌರಭ್ ಜೋಡಿಯು ಚೀನಾದ ಜಿಯಾಂಗ್ ರಾನ್‌ಕ್ಸಿನ್- ಪಾಂಗ್ ವೇ ಜೋಡಿಯನ್ನು 16-6 ಅಂಕಗಳ ಅಂತರದಿಂದ ಮಣಿಸಿತು. ಅರ್ಹತಾ ಸುತ್ತಿನಲ್ಲಿ 482 ಅಂಕ ಗಳಿಸಿ 5ನೇ ಸ್ಥಾನ ಪಡೆದು ಭಾರತದ ಜೋಡಿ ಫೈನಲ್ಸ್ ಪ್ರವೇಶಿಸಿತ್ತು. ಮೊದಲ ಆರು ಸರಣಿಗಳನ್ನು ಗೆದ್ದ ಈ ಜೋಡಿ ಫೈನಲ್‌ನಲ್ಲಿ ಚೀನಿ ಜೋಡಿಗೆ ಮಣ್ಣು ಮುಕ್ಕಿಸಿತು.

ಮನು-ಸೌರಭ್ ಜೋಡಿ 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಎರಡನೇ ಬಾರಿ ಬಂಗಾರ ಗೆದ್ದಿದೆ. ಹೊಸದಿಲ್ಲಿಯಲ್ಲಿ ಫೆಬ್ರವರಿಯಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಈ ಜೋಡಿ ಚಿನ್ನ ಬಾಚಿಕೊಂಡಿತ್ತು.

ಮೌದ್ಗಿಲ್-ಪನ್ವಾರ್ ಜೋಡಿಗೆ ಸ್ವರ್ಣ

ದಿನದ ಆರಂಭದಲ್ಲಿ ಅಂಜುಮ್ ವೌದ್ಗಿಲ್-ಪನ್ವಾರ್ ಜೋಡಿ ಹೋರಾಟಕಾರಿ 10 ಮೀ. ಏರ್ ರೈಫಲ್ ಮಿಶ್ರ ತಂಡ ವಿಭಾಗದ ಪಂದ್ಯದಲ್ಲಿ ಚೀನಾದ ಇನ್ನೊಂದು ಜೋಡಿ ಲಿಯು ರುಕ್ಸುವಾನ್-ಯಾಂಗ್ ಹಾವೊರಾನ್ ವಿರುದ್ಧ 17-15ರಿಂದ ಜಯದ ನಗೆ ಬೀರಿತು. ವೌದ್ಗಿಲ್-ಪನ್ವಾರ್ ಅರ್ಹತಾ ಸುತ್ತಿನಲ್ಲಿ 522.7 ಅಂಕ ಗಳಿಸಿ 6ನೇ ಸ್ಥಾನದೊಂದಿಗೆ ಫೈನಲ್ಸ್‌ಗೆ ತೆರಳಿತ್ತು. ಫೈನಲ್ ಪಂದ್ಯದಲ್ಲಿ ಒಂದು ಹಂತದಲ್ಲಿ ಈ ಜೋಡಿ 11-13ರಿಂದ ಹಿನ್ನಡೆ ಅನುಭವಿಸಿತ್ತು. ಭಾರತದ ಮತ್ತೊಂದು ಜೋಡಿ ಅಪೂರ್ವಿ ಚಾಂಡೇಲಾ ಹಾಗೂ ದೀಪಕ್ ಕುಮಾರ್ ಅರ್ಹತಾ ಸುತ್ತಿನಲ್ಲಿ 522.8 ಅಂಕ ಗಳಿಸಿ ವೌದ್ಗಿಲ್-ಪನ್ವಾರ್ ಜೋಡಿಗಿಂತ ಹೆಚ್ಚಿನ ಸ್ಥಾನ ಪಡೆದರೂ ಫೈನಲ್‌ನಲ್ಲಿ 6ನೇ ಸ್ಥಾನ ಪಡೆದು ನಿರಾಸೆ ತಂದಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News