ಏಕದಿನ ಸ್ಥಾನ ಗಿಟ್ಟಿಸಿಕೊಂಡ ಅಮೆರಿಕ

Update: 2019-04-25 18:51 GMT

ಹೊಸದಿಲ್ಲಿ,ಎ.25: ಒಮಾನ್ ಹಾಗೂ ಅಮೆರಿಕ ಏಕದಿನ ಸ್ಥಾನಮಾನ ಪಡೆದಿದ್ದು, ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಲೀಗ್-2ರಲ್ಲಿ ಸ್ಥಾನ ಪಡೆದಿವೆ. ಈ ಎರಡು ತಂಡಗಳು ಕ್ರಮವಾಗಿ ನಮೀಬಿಯಾ ಹಾಗೂ ಹಾಂಕಾಂಗ್ ವಿರುದ್ಧ ಜಯ ಸಾಧಿಸಿವೆ. ಬುಧವಾರ ಆತಿಥೇಯ ನಮೀಬಿಯಾ ವಿರುದ್ಧ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿರುವ ಒಮಾನ್ ತಂಡ ಐಸಿಸಿ ವಿಶ್ವಕಪ್ ಕ್ರಿಕೆಟ್ ಲೀಗ್ ಡಿವಿಜನ್-2ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಕೆನಡಾ ತಂಡ ಪಪುವಾ ನ್ಯೂಗಿನಿ ತಂಡವನ್ನು ಸೋಲಿಸಿದ ಹಿನ್ನೆಲೆಯಲ್ಲಿ ಒಮಾನ್‌ಗೆ ಏಕದಿನ ಸ್ಥಾನಮಾನ ಸಿಗುವುದು ಖಚಿತವಾಯಿತು. ಸಂದೀಪ್ ಗೌಡ್ ಅಜೇಯ ಅರ್ಧಶತಕದ ನೆರವಿನಿಂದ ಒಮಾನ್ ತಂಡ ನಮೀಬಿಯಾವನ್ನು ರೋಚಕವಾಗಿ ಮಣಿಸಿ ಏಕದಿನ ಸ್ಥಾನಮಾನ ಪಡೆದಿದೆ.

ಒಮಾನ್ ಹಾಗೂ ಅಮೆರಿಕ ಲೀಗ್-2ರಲ್ಲಿ ಸ್ಕಾಟ್ಲೆಂಡ್, ನೇಪಾಳ ಹಾಗೂ ಯುಎಇ ತಂಡವನ್ನು ಸೇರಿಕೊಂಡಿವೆ. 2023ರ ಪುರುಷರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವ ಹಾದಿಯಲ್ಲಿ ಎರಡೂವರೆ ವರ್ಷಗಳ ಅವಧಿಯಲ್ಲಿ ಈ ಮೂರು ತಂಡಗಳು ಪರಸ್ಪರ 36 ಏಕದಿನ ಪಂದ್ಯಗಳನ್ನು ಆಡಬೇಕಾಗಿದೆ.

 ಈ ಹಿಂದೆ 2004ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಿದ್ದ ಅಮೆರಿಕ ತಂಡ ಹಾಂಕಾಂಗ್ ತಂಡವನ್ನು 84 ರನ್‌ಗಳಿಂದ ಮಣಿಸಿತು. ವೆಸ್ಟ್‌ಇಂಡೀಸ್ ಮಾಜಿ ದಾಂಡಿಗ ಕ್ಸೇವಿಯರ್ ಮಾರ್ಷಲ್ ಸಿಡಿಸಿದ ಶತಕದ ನೆರವಿನಿಂದ ಮೊದಲು ಬ್ಯಾಟಿಂಗ್ ಮಾಡಿದ ಅಮೆರಿಕನ್ನರು 8 ವಿಕೆಟ್ ನಷ್ಟಕ್ಕೆ 280 ನ್ ಗಳಿಸಿದ್ದರು. ಕಠಿಣ ಗುರಿ ಬೆನ್ನಟ್ಟಿದ ಹಾಂಕಾಂಗ್ 7 ವಿಕೆಟ್‌ಗಳ ನಷ್ಟಕ್ಕೆ 196 ರನ್ ಗಳಿಸಲಷ್ಟೇ ಶಕ್ತವಾಯಿತು. ಗೆಲ್ಲಲು 214 ರನ್ ಗುರಿ ಪಡೆದಿದ್ದ ಒಮಾನ್ ತಂಡ ಸೂರಜ್ ಕುಮಾರ್ ಹಾಗೂ ಗೌಡ್(ಔಟಾಗದೆ 57)ಅರ್ಧಶತಕದ ನೆರವಿನಿಂದ ಇನ್ನೂ 5 ಎಸೆತಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಿತು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ನಮೀಬಿಯಾ ಒಂದು ಹಂತದಲ್ಲಿ 98 ರನ್‌ಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆಗ 9ನೇ ವಿಕೆಟ್‌ಗೆ 103 ರನ್ ಜೊತೆಯಾಟ ನಡೆಸಿದ್ದ ಝಾನ್ ಗ್ರೀನ್(46) ಹಾಗೂ ಜೆ.ಜೆ. ಸ್ಮಿತ್(60) ತಂಡ 9 ವಿಕೆಟ್‌ಗೆ 213 ರನ್ ಗಳಿಸಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News