ಸಿಂಧು, ಸಮೀರ್, ಸೈನಾ ನೆಹ್ವಾಲ್ ಕ್ವಾರ್ಟರ್ ಫೈನಲ್‌ಗೆ ಪ್ರವೇಶ

Update: 2019-04-25 18:53 GMT

ವುಹಾನ್(ಚೀನಾ), ಎ.25: ಭಾರತದ ಸ್ಟಾರ್ ಶಟ್ಲರ್‌ಗಳಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ನೇರ ಗೇಮ್‌ಗಳ ಅಂತರದಿಂದ ಜಯ ಸಾಧಿಸಿ ಏಶ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಇಲ್ಲಿ ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಸೈನಾ ಕೇವಲ 38 ನಿಮಿಷಗಳ ಹೋರಾಟದಲ್ಲಿ ಎದುರಾಳಿ ಕೊರಿಯಾದ ಕಿಮ್ ಗಾ ಇಯುನ್‌ರನ್ನು 21-13, 21-13 ಅಂತರದಿಂದ ಮಣಿಸಿದರು. ಈ ಗೆಲುವಿನ ಮೂಲಕ ಅಂತಿಮ 8ರ ಘಟ್ಟ ಪ್ರವೇಶಿಸಿದ್ದಾರೆ. ಏಳನೇ ಶ್ರೇಯಾಂಕದ ಸೈನಾ ಮುಂದಿನ ಸುತ್ತಿನಲ್ಲಿ ಜಪಾನ್‌ನ ಮೂರನೇ ಶ್ರೇಯಾಂಕದ ಅಕಾನೆ ಯಮಗುಚಿ ಅವರಿಂದ ಕಠಿಣ ಸವಾಲು ಎದುರಿಸಲಿದ್ದಾರೆ.

ಮತ್ತೊಂದು ಪ್ರಿ-ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಭಾರತದ ಇನ್ನೋರ್ವ ಆಟಗಾರ್ತಿ ಪಿ.ವಿ.ಸಿಂಧು ಕೇವಲ 33 ನಿಮಿಷಗಳಲ್ಲಿ ಇಂಡೋನೇಶ್ಯದ ಚೋರುನ್ನಿಸಾರನ್ನು 21-15, 21-19 ಗೇಮ್‌ಗಳ ಅಂತರದಿಂದ ಮಣಿಸಿದರು.

ವಿಶ್ವದ ನಂ.6ನೇ ಆಟಗಾರ್ತಿ ಕ್ವಾರ್ಟರ್‌ಫೈನಲ್ ಸುತ್ತಿನಲ್ಲಿ ಶ್ರೇಯಾಂಕರಹಿತ ಚೀನಾದ ಕೈ ಯನಿಯನ್‌ರನ್ನು ಎದುರಿಸಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ ಸಮೀರ್ ವರ್ಮಾ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಸಮೀರ್ ಹಾಂಕಾಂಗ್‌ನ ಕಾ ಲಾಂಗ್ ಅಂಗಸ್‌ರನ್ನು 21-12, 21-19 ನೇರ ಗೇಮ್‌ಗಳಿಂದ ಮಣಿಸಿದರು. ಸಮೀರ್ ಅಂತಿಮ-8ರ ಸುತ್ತಿನಲ್ಲಿ ಕಠಿಣ ಸವಾಲು ಎದುರಿಸಲಿದ್ದು,ಚೀನಾದ ಎರಡನೇ ಶ್ರೇಯಾಂಕದ ಶಿ ಯುಖಿ ಅವರನ್ನು ಮುಖಾಮುಖಿಯಾಗುವರು.

ಸ್ಪರ್ಧೆಯಲ್ಲಿದ್ದ ಭಾರತದ ಇತರ ಆಟಗಾರರ ಪೈಕಿ ಮಿಕ್ಸೆಡ್ ಡಬಲ್ಸ್ ಜೋಡಿ ಉತ್ಕರ್ಷ್ ಅರೋರ ಹಾಗೂ ಕರಿಶ್ಮಾ ವಾಡ್ಕರ್ ಇಂಡೋನೇಶ್ಯದ ಹಫೀಝ್ ಫೈಝಲ್ ಹಾಗೂ ಗ್ಲೊರಿಯಾ ಇಮಾನುಯೆಲ್ ಎದುರು 10-21, 15-21 ಗೇಮ್‌ಗಳಿಂದ ಸೋತಿದ್ದಾರೆ.

 ಭಾರತದ ಇನ್ನೋರ್ವ ಮಿಶ್ರ ಡಬಲ್ಸ್ ಜೋಡಿ ವೆಂಕಟ್ ಗೌರವ್ ಪ್ರಸಾದ್ ಹಾಗೂ ಜುಹಿ ದೆೆವಾಂಗನ್ ಕೂಡ ಎರಡನೇ ಸುತ್ತಿನಲ್ಲಿ ಚೀನಾದ ಜೋಡಿ ಯಿಲು ವಾಂಗ್ ಹಾಗೂ ಡಾಂಗ್‌ಪಿಂಗ್ ಹ್ವಾಂಗ್ ವಿರುದ್ಧ 10-21, 9-21 ಅಂತರದಿಂದ ಶರಣಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News