ಭಾರತಕ್ಕೆ ರಶ್ಯ ಮೊದಲ ಎದುರಾಳಿ
ಹೊಸದಿಲ್ಲಿ, ಎ.25: ಭುವನೇಶ್ವರದಲ್ಲಿ ಜೂ.6 ರಿಂದ 15ರ ತನಕ ನಡೆಯಲಿರುವ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಾಗಿರುವ ಅಂತರ್‌ರಾಷ್ಟ್ರೀಯ ಹಾಕಿ ಫೆಡರೇಶನ್(ಎಫ್‌ಐಎಚ್) ಸಿರೀಸ್ ಫೈನಲ್ಸ್ ಟೂರ್ನಿಯಲ್ಲಿ ಆತಿಥೇಯ ಭಾರತ ಕೆಳ ರ್ಯಾಂಕಿನ ತಂಡ ರಶ್ಯ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಜೂ.6 ರಂದು ಆರಂಭವಾಗಲಿರುವ ಟೂರ್ನಿಯ ಮೊದಲ ದಿನದ ಕೊನೆಯ ಪಂದ್ಯದಲ್ಲಿ ವಿಶ್ವದ ಐದನೇ ರ್ಯಾಂಕಿನಲ್ಲಿರುವ ಭಾರತ ವಿಶ್ವದ ನಂ.22ನೇ ತಂಡ ರಶ್ಯವನ್ನು ಎದುರಿಸಲಿದೆ. ಮೊದಲ ದಿನ ದ.ಆಫ್ರಿಕ ಹಾಗೂ ಅಮೆರಿಕ, ಪೊಲ್ಯಾಂಡ್ ಹಾಗೂ ಉಝ್ಬೇಕಿಸ್ತಾನದ ಮಧ್ಯೆ ಪಂದ್ಯ ನಡೆಡಿುಲಿದೆ. ಭಾರತ ‘ಎ’ಗುಂಪಿನಲ್ಲಿದೆ. ‘ಎ’ ಗುಂಪಿನಲ್ಲಿ ಪೊಲ್ಯಾಂಡ್(21ನೇ ರ್ಯಾಂಕ್), ರಶ್ಯ ಹಾಗೂ ಉಝ್ಬೇಕಿಸ್ತಾನ(43ನೇ ರ್ಯಾಂಕ್)ತಂಡಗಳಿವೆ. ‘ಬಿ’ ಗುಂಪಿನಲ್ಲಿ ದ.ಆಫ್ರಿಕ(16ನೇ), ಏಶ್ಯ ಗೇಮ್ಸ್ ಚಾಂಪಿಯನ್ ಜಪಾನ್(18ನೇ), ಅಮೆರಿಕ(25ನೇ) ಹಾಗೂ ಮೆಕ್ಸಿಕೊ(39ನೇ)ತಂಡಗಳಿವೆ.
ಭಾರತ ತಂಡ ರಶ್ಯವನ್ನು ಮುಖಾಮುಖಿಯಾದ ಬಳಿಕ ಇನ್ನುಳಿದ ಗ್ರೂಪ್ ಪಂದ್ಯಗಳಲ್ಲಿ ಪೊಲ್ಯಾಂಡ್(ಜೂನ್ 7) ಹಾಗೂ ಉಝ್ಬೇಕಿಸ್ತಾನ(ಜೂ.10)ತಂಡವನ್ನು ಎದುರಿಸಲಿದೆ. ಕಳಿಂಗ ಸ್ಟೇಡಿಯಂನಲ್ಲಿ ಜೂ.15 ರಂದು ಫೈನಲ್ ಪಂದ್ಯ ನಡೆಯಲಿದೆ. 2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳುವ ಸಲುವಾಗಿ ಭಾರತೀಯ ಮಹಿಳಾ ಹಾಕಿ ತಂಡ ಜಪಾನ್‌ನ ಹಿರೋಶಿಮಾದಲ್ಲಿ ಜೂ.15 ರಿಂದ 23ರ ತನಕ ನಡೆಯುವ ಎಫ್‌ಐಎಚ್ ಸಿರೀಸ್ ಫೈನಲ್ಸ್ ಟೂರ್ನಿಯಲ್ಲಿ ಭಾಗವಹಿಸಲಿದೆ. ಭಾರತ ‘ಎ’ ಗುಂಪಿನಲ್ಲಿದ್ದು, ಪೊಲ್ಯಾಂಡ್(23ನೇ),ಫಿಜಿ ಹಾಗೂ ಉರುಗ್ವೆ(24ನೇ) ಇದೇ ಗುಂಪಿನಲ್ಲಿವೆ. ‘ಬಿ’ ಗುಂಪಿನಲ್ಲಿ ಆತಿಥೇಯ ಜಪಾನ್(14ನೇ),ಚಿಲಿ(16ನೇ), ರಶ್ಯ(25ನೇ) ಹಾಗೂ ಮೆಕ್ಸಿಕೊ(29ನೇ)ತಂಡಗಳಿವೆ. ಭಾರತೀಯ ಮಹಿಳಾ ತಂಡ ಜೂ.15 ರಂದು ಉರುಗ್ವೆ ತಂಡವನ್ನು ಎದುರಿಸುವುದರೊಂದಿಗೆ ತನ್ನ ಅಭಿಯಾನ ಆರಂಭಿಸಲಿದೆ. ಆ ಬಳಿಕ ಪೊಲ್ಯಾಂಡ್(ಜೂ.16) ಹಾಗೂ ಫಿಜಿ(ಜೂನ್ 18)ತಂಡವನ್ನು ಎದುರಿಸಲಿದೆ. ಭಾರತದ ಪುರುಷರ ತಂಡದಂತೆಯೇ ಮಹಿಳಾ ತಂಡ ಕೂಡ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಅಗ್ರ ರ್ಯಾಂಕಿನ ತಂಡವಾಗಿದೆ.
ಎಫ್‌ಐಎಚ್ ಸಿರೀಸ್ ಫೈನಲ್ಸ್ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಇರುವ ಟೂರ್ನಿಗಳ ಪೈಕಿ ಒಂದಾಗಿದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಎಫ್‌ಐಎಚ್ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಸ್ಥಾನ ಪಡೆಯಲಿದೆ. ಈ ಟೂರ್ನಿಯು ಈ ವರ್ಷದ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ನಡೆಯಲಿದೆ. ಟೂರ್ನಿಯ ತಾಣ ಇನ್ನಷ್ಟೇ ಅಂತಿಮವಾಗಬೇಕಾಗಿದೆ.