ಕವಿಂದರ್ ಸೇರಿ ಮೂವರು ಭಾರತೀಯರು ಫೈನಲ್‌ಗೆ
ಬ್ಯಾಂಕಾಕ್, ಎ.25: ಮತ್ತೊಂದು ಕೆಚ್ಚೆದೆಯ ಪ್ರದರ್ಶನ ತೋರಿದ ಭಾರತದ ಕವಿಂದರ್ ಬಿಷ್ಟ್ (56 ಕೆಜಿ)ಹಾಗೂ ಇತರ ಮೂವರು ಭಾರತೀಯರು ಗುರುವಾರ ಏಶ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯಕ್ಕೆ ಅರ್ಹತೆ ಪಡೆದಿದ್ದಾರೆ. ದೀಪಕ್ ಸಿಂಗ್ (49 ಕೆಜಿ) ಹಾಗೂ ಆಶಿಶ್ ಕುಮಾರ್ (75 ಕೆಜಿ) ಪುರುಷರ ವಿಭಾಗದ ಫೈನಲ್ಸ್‌ನಲ್ಲಿ ಕವಿಂದರ್‌ರನ್ನು ಸೇರಿಕೊಂಡರೆ, ಮಹಿಳಾ ಸ್ಪರ್ಧೆಯಲ್ಲಿ ಪೂಜಾ ರಾಣಿ (75 ಕೆಜಿ) ಈ ಸಾಧನೆ ಮಾಡಿದರು. ಅನುಭವಿ ಆಟಗಾರ್ತಿ ಎಲ್.ಸರಿತಾ ದೇವಿ (60 ಕೆಜಿ) ಹಾಗೂ ಮನೀಷಾ (54 ಕೆಜಿ) ಕಂಚಿಗೆ ತೃಪ್ತಿಪಟ್ಟರು. ರಾಷ್ಟ್ರೀಯ ಚಾಂಪಿಯನ್ ದೀಪಕ್‌ಸಿಂಗ್ ಅವರ ಸೆಮಿಫೈನಲ್ ಎದುರಾಳಿ ಕಝಕಿಸ್ತಾನದ ಟೆಮಿರ್ಟಸ್ ಝುಸ್ಸಾಪೊವ್ ಅವರು ಗಾಯದ ಕಾರಣ ವಾಕ್ ಓವರ್ ನೀಡಿ ದೀಪಕ್ ಹಾದಿಯನ್ನು ಸುಗಮಗೊಳಿಸಿದರು.
ಇನ್ನು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಕಝಕಿಸ್ತಾನದ ಕೈರಾಟ್ ಯೆರಲಿಯೆವ್‌ರನ್ನು ಮಣಿಸಿ ಪಾರಮ್ಯ ಮೆರೆದಿದ್ದ ಕವಿಂದರ್, ಸೆಮಿಫೈನಲ್‌ನಲ್ಲಿ ಮಂಗೋಲಿಯದ ಎಂಖ್-ಅಮಾರ್ ಖಾಖು ಅವರಿಗೆ ಆಘಾತ ನೀಡಿದರು. ಎರಡು ಸುತ್ತಿನಲ್ಲಿ ಕಣ್ಣಿಗೆ ರಕ್ತ ಬರುವಂತೆ ಎದುರಾಳಿ ಆಟಗಾರನಿಗೆ ಕವಿಂದರ್ ಗುದ್ದು ನೀಡಿದರು. ಮತ್ತೊಂದು ಹೈ-ವೋಲ್ಟೇಜ್ ಪಂದ್ಯದಲ್ಲಿ ಆಶಿಶ್ ಅವರು ಇರಾನ್‌ನ ಸೈಯದ್ ಶಾಹಿನ್ ವೌಸವಿ ಅವರ ಸವಾಲನ್ನು ಮೀರಿ ನಿಂತರು. ಹೂಕ್ಸ್ ಹಾಗೂ ನೇರ ಪಂಚ್‌ಗಳ ಮೂಲಕ ಎದುರಾಳಿ ಎದೆ ನಡುಗಿಸಿದರು ಆಶಿಶ್. ಇನ್ನು ಮಹಿಳಾ ಸ್ಪರ್ಧೆಗಳಲ್ಲಿ ಮನೀಷಾ ಅವರು ತೈವಾನ್‌ನ ಹುವಾಂಗ್ ವಿರುದ್ಧ ಮಣಿದರೆ, ಸರಿತಾ ದೇವಿ ಚೀನಾದ ಯಾಂಗ್ ವೆನ್ಲುಗೆ ಶರಣಾದರು. ಇನ್ನು ಪೂಜಾ ಅವರು ಕಝಕಿಸ್ತಾನದ ಫರಿಝಾ ಶೋಲ್ಟೆ ವಿರುದ್ಧ ಏಕಪಕ್ಷೀಯವಾಗಿ ಪಂದ್ಯ ಜಯಿಸಿ ಬೀಗಿದರು.