ಕಂಚಿನ ಪದಕದ ಸುತ್ತಿಗೆ ಭಾರತದ ಮೂವರು
ಕ್ಸಿಯಾನ್ (ಚೀನಾ), ಎ.25: ಭಾರತದ ಮಹಿಳಾ ಕುಸ್ತಿಪಟುಗಳಾದ ಏಶ್ಯನ್ ಗೇಮ್ಸ್ ಕಂಚು ವಿಜೇತೆ ದಿವ್ಯಾ ಕಾಕ್ರನ್, ಮಂಜು ಕುಮಾರಿ ಹಾಗೂ ಸೀಮಾ ಗುರುವಾರ ಏಶ್ಯನ್ ಮಹಿಳಾ ಕುಸ್ತಿ ಚಾಂಪಿಯನ್‌ಶಿಪ್‌ನ ಕಂಚು ಪದಕದ ಪ್ಲೇ ಆಫ್ ಸುತ್ತಿಗೆ ಆಯ್ಕೆಯಾಗಿದ್ದಾರೆ. ಕಾಕ್ರನ್ ಹಾಗೂ ಮಂಜು ತಮ್ಮ ಸೆಮಿಫೈನಲ್ ಪಂದ್ಯಗಳಲ್ಲಿ ಸೋಲುವ ಮೂಲಕ ಕಂಚಿನ ಪದಕಗಳ ಸುತ್ತಿಗೆ ಪ್ರವೇಶ ಪಡೆದರೆ, ಸೀಮಾ ಅವರು ರಿಪಚೇಜ್ ಸುತ್ತಿನಲ್ಲಿ ಗೆಲ್ಲುವ ಮೂಲಕ ಮೂರು-ನಾಲ್ಕು ಸ್ಥಾನದ ಪಂದ್ಯಕ್ಕೆ ಅರ್ಹತೆ ಪಡೆದರು. ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಫೆಂಗ್ ಝೌ ಅವರ ವಿರುದ್ಧ ಸೋಲುವ ಮೂಲಕ ಕಾಕ್ರನ್ ಫೈನಲ್ ತಲುಪಲು ವಿಫಲರಾದರು. ಪಾದದ ನೋವಿನಿಂದ ಗುಣಮುಖರಾಗಿ ಆಟಕ್ಕೆ ಮರಳಿರುವ ಕಾಕ್ರನ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಪ್ರಭಾವಿ ಪ್ರದರ್ಶನದ ಮೂಲಕ ವಿಯೆಟ್ನಾಂ ಸ್ಪರ್ಧಿ ಹಾಂಗ್ ಥುಯ್ ಎನ್‌ಗುಯೆನ್ ವಿರುದ್ಧ 10-0ರ ಜಯ ಸಾಧಿಸಿ ಬೀಗಿದ್ದರು. 69 ಕೆಜಿ ವಿಭಾಗದ ಕಂಚಿನ ಪದಕದ ಸುತ್ತಿನಲ್ಲಿ ಕಾಕ್ರನ್ ಮಂಗೋಲಿಯದ ಬ್ಯಾಟ್‌ಸೆಟ್ಸೆಗ್ ಸೊರೊಂರೊನ್‌ಬೋಲ್ಡ್ ವಿರುದ್ಧ ಆಡಲಿದ್ದಾರೆ. ಇನ್ನು ಮಂಜು ಕುಮಾರಿ 59 ಕೆಜಿ ವಿಭಾಗದಲ್ಲಿ ಮಂಗೋಲಿಯದ ಬ್ಯಾಟ್‌ಸೆಟ್ಸೆಗ್ ವಿರುದ್ಧವೇ 6-15ರಿಂದ ಸೋಲು ಅನುಭವಿಸಿದರು. ಮಂಜು ತಮ್ಮ ಮುಂದಿನ ಪಂದ್ಯದಲ್ಲಿ ಥಾಯ್ಲೆಂಡ್‌ನ ಹುವಾಂಗ್ ಡಾವ್ ವಿರುದ್ಧ ಸೆಣಸಲಿದ್ದಾರೆ. ಸೀಮಾ 50 ಕೆಜಿ ವಿಭಾಗದಲ್ಲಿ ತಮ್ಮ ಮುಂದಿನ ಪಂದ್ಯದಲ್ಲಿ ಕಝಕಿಸ್ತಾನದ ವೆಲೆಂಟಿನಾ ಇವಾನೊವ್ನಾ ಇಸ್ಲಾಮೊವಾ ವಿರುದ್ಧ ಸೆಣಸಲಿದ್ದಾರೆ. ಆದಾಗ್ಯೂ ಲಲಿತಾ ಹಾಗೂ ಪೂಜಾ ಸೋಲುವ ಮೂಲಕ ಕ್ರಮವಾಗಿ 55 ಕೆಜಿ ಹಾಗೂ 76 ಕೆಜಿ ವಿಭಾಗದಲ್ಲಿ ಭಾರತದ ಅಭಿಯಾನ ಅಂತ್ಯವಾಯಿತು.