ಎಂಟರ ಘಟ್ಟಕ್ಕೆ ನಿಶಿಕೋರಿ
Update: 2019-04-26 13:21 IST
ಬಾರ್ಸಿಲೋನ, ಎ.25: ಫೆಲಿಕ್ಸ್ ಅಗರ್-ಅಲೈಸ್ಸಿಮ್‌ರನ್ನು 6-1, 6-3 ಸೆಟ್‌ಗಳಿಂದ ಮಣಿಸಿದ ಜಪಾನ್ ಆಟಗಾರ ಕೀ ನಿಶಿಕೋರಿ ಗುರುವಾರ ಬಾರ್ಸಿಲೋನ ಓಪನ್ ಟೆನಿಸ್‌ನ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
ವಿಶ್ವ ರ್ಯಾಂಕಿಂಗ್‌ನಲ್ಲಿ 7ನೇ ಸ್ಥಾನದಲ್ಲಿರುವ ನಿಶಿಕೋರಿ, ಪಂದ್ಯದ ಮೊದಲ ಗೇಮ್‌ನಲ್ಲಿ 31ನೇ ರ್ಯಾಂಕಿನ ಕೆನಡಾದ ಯುವ ಆಟಗಾರನ ಸರ್ವ್ ಮುರಿದರು. 5ನೇ ಹಾಗೂ 7ನೇ ಗೇಮ್‌ನಲ್ಲೂ ಎದುರಾಳಿಯ ಸರ್ವ್ ಮುರಿದ ನಿಶಿಕೋರಿ, ಮೊದಲ ಸೆಟ್‌ನ್ನು ಸುಲಭವಾಗಿ ತಮ್ಮದಾಗಿಸಿಕೊಂಡರು.
ಎರಡನೇ ಸೆಟ್‌ನ ನಾಲ್ಕನೇ ಗೇಮ್‌ನಲ್ಲಿ ನಿಶಿಕೋರಿಯ ಸರ್ವ್ ಮುರಿದ ಅಗರ್ ತಿರುಗೇಟು ನೀಡುವ ಮುನ್ಸೂಚನೆ ನೀಡಿದರು. ಆದರೆ ಆಟದಲ್ಲಿ ಪಾರಮ್ಯ ಮೆರೆದ ನಿಶಿಕೋರಿ ತಮ್ಮ ಅನುಭವ ಬಳಸಿಕೊಂಡು ಸೆಟ್ ಗೆದ್ದು, ಪಂದ್ಯವನ್ನೂ ಗೆದ್ದರು.
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ 7ನೇ ಶ್ರೇಯಾಂಕದ ರಶ್ಯದ ಮೆಡ್ವಡೆವ್ ಅವರು ಅಮೆರಿಕದ ಮೆಕೆಂಝಿ ಮೆಕ್‌ಡೊನಾಲ್ಡ್ ರನ್ನು 6-3, 6-2ರಿಂದ ಸೋಲಿಸಿದರು.