ಭುಜದ ನೋವು: ಸ್ಟೇಯ್ನ್ ಐಪಿಎಲ್‌ನಿಂದ ಹೊರಕ್ಕೆ
ಬೆಂಗಳೂರು, ಎ.25: ಕೇವಲ ಎರಡು ಪಂದ್ಯಗಳನ್ನು ಆಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಡೇಲ್ ಸ್ಟೇಯ್ನ ಗುರುವಾರ ಭುಜದ ಉರಿಯೂತದ ಕಾರಣ ಈ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಸಂಪೂರ್ಣ ಹೊರಗುಳಿದಿದ್ದಾರೆ.
ಗಾಯಾಳು ನಥಾನ್ ಕೌಲ್ಟರ್ ನೀಲ್ ಬದಲಿಗೆ ಇತ್ತೀಚೆಗೆ ಆರ್‌ಸಿಬಿ ತಂಡ ಸೇರಿಕೊಂಡಿದ್ದ ದ.ಆಫ್ರಿಕದ ವೇಗಿ, ಬುಧವಾರ ಸಣ್ಣಮಟ್ಟದ ನೋವಿನ ಕಾರಣ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು.
‘‘ ಡೇಲ್ ಸ್ಟೇಯ್ನ ಭುಜದ ಉರಿಯೂತದಿಂದ ಬಳಲುತ್ತಿರುವ ಕಾರಣ ದೀರ್ಘಕಾಲದ ವಿಶ್ರಾಂತಿಗೆ ಸೂಚಿಸಲಾಗಿದೆ. ಅವರ ಆರೋಗ್ಯದ ಹಿತದೃಷ್ಟಿಯಿಂದ ಮುಂಬರುವ ಎಲ್ಲ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ ’’ ಎಂದು ಆರ್‌ಸಿಬಿ ಫ್ರಾಂಚೈಸಿ ಚೇರ್ಮನ್ ಸಂಜೀವ್ ಚುರಿವಾಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗಾಯಾಳು ಬೌಲರ್ ಸ್ಟೇಯ್ನ ಸುಮಾರು 2 ವರ್ಷಗಳ ಬಳಿಕ ಐಪಿಎಲ್‌ಗೆ ಮರಳಿ, ಈ ಆವೃತ್ತಿಯಲ್ಲಿ ಸತತ ಸೋಲುಗಳನ್ನು ಕಾಣುತ್ತಿದ್ದ ಆರ್‌ಸಿಬಿಗೆ ಎರಡು ಪಂದ್ಯಗಳಲ್ಲಿ ಜಯದ ನಗೆ ಬೀರುವಂತೆ ಮಾಡಿದ್ದರು.
ಮೇ 30ರಂದು ಇಂಗ್ಲೆಂಡ್‌ನಲ್ಲಿ ಏಕದಿನ ವಿಶ್ವಕಪ್ ಆರಂಭವಾಗುತ್ತಿರುವುದರಿಂದ ಸ್ಟೇಯ್ನಿ ತಮ್ಮ ಗಾಯವನ್ನು ಉಲ್ಭಣಗೊಳಿಸಿಕೊಳ್ಳಲು ಬಯಸಿಲ್ಲ. 2016ರಲ್ಲಿ ಪರ್ತ್‌ನಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧ ನಡೆದ ಪಂದ್ಯದಲ್ಲಿ ಭುಜದ ನೋವಿಗೆ ತುತ್ತಾಗಿದ್ದ ಅವರು ಸುಮಾರು 2 ವರ್ಷಗಳಿಂದ ಕಣಕ್ಕಿಳಿದಿರಲಿಲ್ಲ.