×
Ad

ಅಪರೂಪದ ದಾಖಲೆ ನಿರ್ಮಿಸಿದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ

Update: 2019-04-28 00:11 IST

ಹೊಸದಿಲ್ಲಿ, ಎ.27: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಈ ವರ್ಷದ ಐಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದರು. ಶುಕ್ರವಾರ ಚೆನ್ನೈನಲ್ಲಿ ನಡೆದ ಐಪಿಎಲ್‌ನಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ ಮುಂಬೈ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 46 ರನ್‌ಗಳಿಂದ ಮಣಿಸಿತು. ಪರಿಪೂರ್ಣ ಪ್ರದರ್ಶನ ನೀಡಿ ಚೆನ್ನೈ ತಂಡವನ್ನು ಅದರದ್ದೇ ನೆಲದಲ್ಲಿ ಮಣಿಸಿದ ರೋಹಿತ್ ನಾಯಕತ್ವದ ಮುಂಬೈ ಸತತ ಐದು ಪಂದ್ಯಗಳಲ್ಲಿ ಜಯ ಸಾಧಿಸಿ ಬೀಗುತ್ತಿದ್ದ ಚೆನ್ನೈಗೆ ಕಡಿವಾಣ ಹಾಕಿತು. 48 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್‌ಗಳ ನೆರವಿನಿಂದ 67 ರನ್ ಗಳಿಸಿದ ರೋಹಿತ್ ಮುಂಬೈ ಪರ ಗರಿಷ್ಠ ಸ್ಕೋರ್ ಗಳಿಸಿದರು. ಈ ವೇಳೆ ಅವರು ಹಲವು ದಾಖಲೆಗಳನ್ನು ಮುರಿದರು. ರೋಹಿತ್ ಚೆನ್ನೈ ವಿರುದ್ಧ 7 ಬಾರಿ ಫಿಫ್ಟಿ ಪ್ಲಸ್ ಸ್ಕೋರ್ ಗಳಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ ಆಟಗಾರನ ಉತ್ತಮ ಸಾಧನೆಯಾಗಿದೆ.

ಚೆನ್ನೈ ವಿರುದ್ಧ ಆಡಿದ ಕಳೆದ 5 ಪಂದ್ಯಗಳಲ್ಲಿ 3ನೇ ಬಾರಿ ಅರ್ಧಶತಕ ಗಳಿಸಿದ ರೋಹಿತ್ ಉತ್ತಮ ಫಾರ್ಮ್ ಮುಂದುವರಿಸಿದರು. ಶುಕ್ರವಾರ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವ ರೋಹಿತ್ 17ನೇ ಬಾರಿ ಈ ಗೌರವಕ್ಕೆ ಪಾತ್ರರಾದರು. ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಸಂಖ್ಯೆಯ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಭಾರತೀಯ ಆಟಗಾರ ಎನಿಸಿಕೊಂಡರು. ತಲಾ 16 ಬಾರಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿರುವ ಯೂಸುಫ್ ಪಠಾಣ್ ಹಾಗೂ ಎಂ.ಎಸ್. ಧೋನಿ ಸಾಧನೆ ಸರಿಗಟ್ಟಿದರು. ಚೆನ್ನೈನ ಚಿಪಾಕ್ ಸ್ಟೇಡಿಯಂನಲ್ಲಿ ರೋಹಿತ್ ಅವರು ಸಿಎಸ್‌ಕೆ ವಿರುದ್ಧ ಆರು ಪಂದ್ಯಗಳನ್ನು ಆಡಿದ್ದಾರೆ. ಡೆಕ್ಕನ್ ಚಾರ್ಜರ್ಸ್(2008,2010)ಪರ 2 ಬಾರಿ, ಮುಂಬೈ ಇಂಡಿಯನ್ಸ್ ಆಟಗಾರನಾಗಿ ಎರಡು ಬಾರಿ(2012-13) ಹಾಗೂ ನಾಯಕನಾಗಿ ಎರಡು ಬಾರಿ(2015-2019) ಆಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News